ಮೈಸೂರು: ನಾಗರಿಕರು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವಂತೆಯೇ ಮೂಲ ಭೂತ ಕರ್ತವ್ಯಗಳನ್ನೂ ಪಾಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿಜಿಎಂ ಪಾಟೀಲ್ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಮೂಲಭೂತ ಕರ್ತವ್ಯಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಹೆಚ್ಚಿನ ಜನ ಮೂಲಭೂತ ಹಕ್ಕುಗಳನ್ನು ಪಡೆಯುತ್ತಾರೆ. ಇದಕ್ಕೆ ಚ್ಯುತಿಯಾದರೆ ವ್ಯಾಜ್ಯ ಗಳನ್ನು ಹೂಡುತ್ತಾರೆ. ಆದರೆ, ಮೂಲಭೂತ ಕರ್ತವ್ಯಗಳ ಪಾಲನೆಯ ಬಗ್ಗೆ ಚಿತಿಸುವುದೇ ಇಲ್ಲ. ಇದನ್ನು ಮನಗಂಡು 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಿ ಪಾಲಿಸುವಂತೆ ತಿಳಿಸಲಾಗಿದೆ ಎಂದರು.
ಮೂಲಭೂತ ಕರ್ತವ್ಯಗಳಲ್ಲಿ ಸಂವಿಧಾನದ ಅಂಗ ಸಂಸ್ಥೆಗಳನ್ನು ಗೌರವಿಸ ಬೇಕು, ನಮಗೆ ಸ್ವಾತಂತ್ರ ತಂದು ಕೊಡಲು ಶ್ರಮಿಸಿದ ಸ್ವಾತಂತ್ರ ಹೋರಾಟ ಗಾರರನ್ನು ಗೌರವಿಸಬೇಕು, ಭಾರತ ದೇಶದ ಸಾರ್ವ ಭೌಮತ್ವವನ್ನು ಉಳಿಸಲು ಶ್ರಮಿಸಬೇಕು. ದೇಶದ ಭದ್ರತೆಗೆ ಶ್ರಮಿಸುವುದರ ಜೊತೆಗೆ ಸೇವೆ ಸಲ್ಲಿಸಬೇಕು, ಭಾತೃತ್ವವನ್ನು ಕಾಪಾಡಬೇಕು, ದೇಶದ ಭವ್ಯ ಪರಂಪರೆ ಹಾಗೂ ಹಿರಿಮೆಯನ್ನು ಎತ್ತಿ ಹಿಡಿಯಬೇಕು, ಪರಿಸರ, ಕಾಡುಪ್ರಾಣಿ, ಅರಣ್ಯ, ಕೆರೆ, ಮುಂತಾದ ಪರಿಸರದ ಆಸ್ತಿಯನ್ನು ಸಂರಕ್ಷಿಸಬೇಕು.
ಮಾನವೀಯ ವîೌಲ್ಯಗಳನ್ನು ಬೆಳಸಿಕೊಳ್ಳಬೇಕು. ಸಾರ್ವಜನಿಕ ಆಸ್ತಿಯನ್ನು ಕಾಪಾಡಿ ಹಿಂಸಾಚಾರವನ್ನು ತೊಡೆದು ಹಾಕಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂಬ ಹತ್ತು ಮೂಲಭೂತ ಕರ್ತವ್ಯಗಳಿವೆ. ಇವುಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಭಾರತ ಸಮೃದ್ಧ ದೇಶವಾಗುವುದರಲ್ಲಿ ಸಂಶಯವೇ ಇಲ್ಲ ಎಂದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರುಲ್ಲಾ ಮಾತನಾಡಿ, ಪ್ರತಿಯೊಬ್ಬರು ಕಾನೂನು ಪಾಲಿಸುವ ನಾಗರಿಕರಾಗಬೇಕು.
ಮೂಲಭೂತ ಹಕ್ಕು ಗಳನ್ನು ಪಡೆದುಕೊಳ್ಳುವ ನಾವು ಶೇ.10 ರಷ್ಟು ಸಹ ಮೂಲಭೂತ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದರು. ಮೈಸೂರು ವಿವಿ ಕಾನೂನು ವಿಭಾಗದ ಪ್ರಾಧ್ಯಾಪಕ ಪೊ›.ಸಿ.ಬಸವರಾಜು ಮಾತನಾಡಿ, ಹಕ್ಕುಗಳ ಹಿಂದೆ ಸದಾ ಕರ್ತವ್ಯಗಳು ಇರುತ್ತದೆ ಎಂಬುದನ್ನು ಮರೆಯ ಬಾರದು. ಕರ್ತವ್ಯಗಳನ್ನು ಸದಾ ಗೌರವಿಸಿ, ಪಾಲಿಸಬೇಕು. ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ಸಮಾಜದ ಅನಿಷ್ಠ ಪದ್ಧತಿಗಳನ್ನು ಸಹ ದೂರ ಮಾಡಬಹುದು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ವಕೀಲ ಎ.ಎಂ.ಭಾಸ್ಕರ್ ಮಾತನಾಡಿ, ಮಹಿಳೆಯರಿಗೆ ಹಿಂದೆ ಸಮಾನ ಅವಕಾಶಗಳನ್ನು ನೀಡಿರಲಿಲ್ಲ. ಇವರ ಹಕ್ಕುಗಳು ಹಾಗೂ ಸಮಾನ ಅವಕಾಶಕ್ಕಾಗಿ ಜ್ಯೋತಿ ಬಾಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತ ಮಹಿಳೆಯರಿಗೆ ಶಿಕ್ಷಣ, ಡಾ| ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್‌ನ್ನು ಮಂಡಿಸಿದರು ಎಂದು ತಿಳಿಸಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಜಿ.ವಿ. ರಾಮಮೂರ್ತಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಿ.ಟಿ. ವಿಜಯ್, ಪ್ರಾಧ್ಯಾಪಕರಾದ ಬಸವರಾಜು, ಭಾರತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಉಪಸ್ಥಿತರಿದ್ದರು.