Advertisement

ಮೊಬೈಲ್ಮಾಹಿತಿ ಗಣತಿ

12:57 AM Aug 04, 2019 | Team Udayavani |

ನವದೆಹಲಿ: 2021ರಲ್ಲಿ ನಡೆಯಲಿರುವ ಜನಗಣತಿಯಲ್ಲಿ ಹಲವು ಮಹತ್ವದ ಮಾಹಿತಿಯನ್ನೂ ದಾಖಲಿಸಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ಗಣತಿಯಲ್ಲಿ ಎಷ್ಟು ಜನರಿದ್ದಾರೆ, ಅವರ ಜಾತಿ, ಉದ್ಯೋಗ, ವಿದ್ಯಾರ್ಹತೆ ಸೇರಿದಂತೆ ಇತರ ಮಾಹಿತಿ ಕೇಳಲಾಗುತ್ತಿತ್ತು. ಆದರೆ ಈ ಬಾರಿ ಅಂದರೆ 2021ರಲ್ಲಿ ನಡೆವ ಗಣತಿಯಲ್ಲಿ ಆಧುನಿಕ ಕಾಲಕ್ಕೆ ಅನುಗುಣವಾಗಿ ಮೊಬೈಲ್ ಸಂಪರ್ಕ, ಬ್ಯಾಂಕ್‌ ಖಾತೆ ಮಾಹಿತಿಯನ್ನೂ ಕೇಳಲು ನಿರ್ಧರಿಸಲಾಗಿದೆ. ಅಂದರೆ ಕುಟುಂಬದಲ್ಲಿ ಎಷ್ಟು ಜನರ ಬಳಿ ಬ್ಯಾಂಕ್‌ ಖಾತೆಗಳಿವೆ, ಇಂಟರ್‌ನೆಟ್ ಸಂಪರ್ಕ ಇದೆಯೇ, ಡಿಟಿಎಚ್, ಟಿವಿ ಸಂಪರ್ಕ ಇದೆಯೇ, ಮನೆಯ ಎಷ್ಟು ಜನರಲ್ಲಿ ಸ್ಮಾರ್ಟ್‌ಫೋನ್‌ ಇವೆ ಎಂಬೆಲ್ಲ ಮಾಹಿತಿ ದಾಖಲಿಸಲಾಗುತ್ತದೆ.

Advertisement

ಜಾತಿ ಗಣತಿ ಇಲ್ಲ: ಆಸಕ್ತಿಕರ ಸಂಗತಿಯೆಂದರೆ ಈ ಬಾರಿ ಜಾತಿಗಳ ವಿವರಗಳನ್ನು ಕೇಳಲಾಗುವುದಿಲ್ಲ. 2011ರಲ್ಲಿ ಗಣತಿ ಮಾಡಿದಾಗಿನ ಜಾತಿ ವಿವರಗಳನ್ನೇ ಇನ್ನೂ ಸರ್ಕಾರ ಬಹಿರಂಗಗೊಳಿಸಿಲ್ಲ. ಅಲ್ಲದೆ, 2011ರ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ ಪರಿಷ್ಕರಿಸುವುದರಲ್ಲಿ ತೊಡಗಿದೆ. ಹೀಗಾಗಿ ಈ ಬಾರಿ ಜಾತಿ ಮಾಹಿತಿ ಸಂಗ್ರಹಿಸದೇ ಇರಲು ನಿರ್ಧರಿಸಲಾಗಿದೆ.

2020 ಏಪ್ರಿಲ್ ನಿಂದ ಆರಂಭವಾಗಿ 2020 ಸೆಪ್ಟೆಂಬರ್‌ವರೆಗೆ ಈ ಪ್ರಕ್ರಿಯೆ ಮೊದಲ ಹಂತದಲ್ಲಿ ನಡೆಯಲಿದೆ. ನಂತರ ಇದರ ಮರುಪರಿಶೀಲನೆ 2021 ಫೆ.9ರಿಂದ 28ರವರೆಗೆ ನಡೆಯಲಿದ್ದು, 2021 ಮಾ.1ಕ್ಕೆ ಅಂತಿಮಗೊಳಿಸಲಾಗುತ್ತದೆ.

ಒಟ್ಟು 34 ವಿಧದ ಮಾಹಿತಿಯನ್ನು ಜನರಿಂದ ಈ ವೇಳೆ ಸಂಗ್ರಹಿಸಲಾಗುತ್ತದೆ. ಒಟ್ಟು 31 ಲಕ್ಷ ಜನರನ್ನು ಗಣತಿಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. 2011ರಲ್ಲಿ 27 ಲಕ್ಷ ಜನ ಗಣತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.

ಫೋನ್‌ನಲ್ಲೂ ಮಾಹಿತಿ ಸಂಗ್ರಹ: ಗಣತಿ ಮಾಡುವವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಮಾಹಿತಿ ಸಂಗ್ರಹ ಮಾಡಬಹುದು ಅಥವಾ ಕಾಗದದಲ್ಲಿ ಬರೆದುಕೊಂಡು ಅದನ್ನು ಸ್ಮಾರ್ಟ್‌ಫೋನ್‌ಗೆ ಅಳವಡಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next