ಮಂಗಳೂರು: ಲೋಕಸಮರದಲ್ಲಿ ಮತದಾರರ ತೀರ್ಪಿಗೆ ಕ್ಷಣಗಣನೆ ಮಾತ್ರ ಉಳಿದಿದೆ. ಈ ಮಧ್ಯೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ.
ದ.ಕ. ಜಿಲ್ಲೆಗೆ ಕಾಂಗ್ರೆಸ್ ಏನು ಕೊಡುಗೆ ನೀಡಿದೆ?
ಭೂ ಸುಧಾರಣೆಗಳು ಕಾಯ್ದೆಯಿಂದ 2,21,886 ಎಕರೆ ಭೂಮಿಯನ್ನು ದಕ್ಷಿಣ ಕನ್ನಡದ 70,591 ಗೇಣಿದಾರ ಕುಟುಂಬಗಳಿಗೆ ನಮ್ಮ ಕಾಂಗ್ರೆಸ್ ಸರಕಾರ ವರ್ಗಾಯಿಸಿತ್ತು. 1951ರಲ್ಲಿ ಮಂಗಳೂರು ವಿಮಾನ ನಿಲ್ದಾಣ ಸ್ಥಾಪನೆ, 1960ರಲ್ಲಿ ಸುರತ್ಕಲ್‌ನಲ್ಲಿ ನ್ಯಾಶನಲ… ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸಿದ್ದು, 1969ರಲ್ಲಿ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು, 1970ರಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, 1974ರಲ್ಲಿ ನವಮಂಗಳೂರು ಬಂದರು ನಿರ್ಮಿಸಿದ್ದು, 1980ರಲ್ಲಿ ವಿಜಯ ಬ್ಯಾಂಕ್ ರಾಷ್ಟ್ರೀಕರಣ, 1980ರಲ್ಲಿ ಮಂಗಳೂರು ವಿವಿ ಸ್ಥಾಪನೆ, 1988ರಲ್ಲಿ ಎಂಆರ್‌ಪಿಎಲ… ಸ್ಥಾಪಿಸಿದ್ದು ಕಾಂಗ್ರೆಸ್.
ದ.ಕ. ಜಿಲ್ಲೆಯ ಯುವಕರ ಉದ್ಯೋಗ ನೀಡುವ ನಿಟ್ಟಿನಲ್ಲಿ ನಿಮ್ಮ ಪಕ್ಷ ಏನು ಮಾಡಿದೆ?
-1993ರಲ್ಲಿ ವೀರಪ್ಪ ಮೊಲಿ ಕಾಲದಲ್ಲಿ ಬಂದ ಸಿಇಟಿ ಸಹಾಯದಿಂದ ಸೀಟು ಪಡೆದ ದಕ್ಷಿಣ ಕನ್ನಡದ ಬಿಲ್ಲವ, ಕುಲಾಲ, ಮಡಿವಾಳ, ಮುಸ್ಲಿಂ, ಗೌಡ ಬಂಟ್ಸ್, ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಸಾವಿರಾರು ವಿದ್ಯಾರ್ಥಿಗಳು ಇಂದು ಭಾರತ ಮತ್ತು ವಿದೇಶಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಸರಕಾರದಿಂದಾಗಿ. 2010 ರಲ್ಲಿ ಬೈಕಂಪಾಡಿಯಲ್ಲಿ ಭಾರತ್ ಪೆಟ್ರೋಲಿಯಂ, ಎಲ್‌ಪಿಜಿ ಬಾಟಿÉಂಗ್ ಘಟಕ ನಿರ್ಮಾಣ ಮಾಡಲಾಗಿದೆ. ಮಂಗಳೂರು ಎಸ್‌ಇಝಡ್ ನಿರ್ಮಿಸಿ ನೂರಾರು ಕಂಪೆನಿಗಳನ್ನು ಸ್ಥಾಪಿಸಿ ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿರುವುದು ನಾವು.
ದ.ಕ. ಜಿಲ್ಲೆಗೆ 1.16 ಲಕ್ಷ ಕೋ. ರೂ. ಅನುದಾನ ಬಂದಿದೆ ಎಂದು ಬಿಜೆಪಿ ವಿವರ ನೀಡಿದೆಯಲ್ಲ… ಕರಾವಳಿ ಅಭಿವೃದ್ಧಿಗೆ ನಳಿನ್ ಕೊಡುಗೆ ಏನು?
ಪಂಪ್‌ವೆಲ್ ಫ್ಲೈ ಓವರ್ 12 ವರ್ಷಗಳ ಕಾಲ ಕಟ್ಟಿದ್ದೇ ಅವರ ಏಕೈಕ ಸಾಧನೆ. ಅದೂ ಮಳೆ ಬಂದಾಗ ನೀರಿನಲ್ಲಿ ಮುಳುಗುತ್ತದೆ. ಮೋದಿಯವರ ಆಡಳಿತದಲ್ಲಿ 15 ರೂ.ಗಳಿಗೆ 1 ಅಮೆರಿಕನ್ ಡಾಲರ್ ಸಿಗುತ್ತದೆ ಎಂದು ನಳಿನ್ ಹೇಳಿದ್ದರು. ಅದು ಸಿಗುತ್ತದೆಯೇ? 2 ಸಾವಿರ ರೂ.ಗೆ ಒಂದು ಟನ್ ಮರಳು ಸಿಗುತ್ತದೆ ಎಂದಿದ್ದರು. ಸಿಗುತ್ತದೆಯೇ? ಪೆಟ್ರೋಲ್ ಬೆಲೆ ಇಳಿಕೆ ಆಗಿದೆಯೇ? ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡಿದ ಬಿಜೆಪಿಯವರು 33 ವರ್ಷ ಏನು ಕೊಡುಗೆ ನೀಡಿದ್ದಾರೆ?
ಅಭಿವೃದ್ಧಿಗೆ ಕಾಂಗ್ರೆಸ್ ವಿರೋಧ ಮಾಡಿದೆ ಎಂಬುದು ಬಿಜೆಪಿ ಆರೋಪ?
ಇಂದಿರಾ ಗಾಂಧಿಯಿಂದ ಉದ್ಘಾಟನೆ ಗೊಂಡಿದ್ದ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ತೆಕ್ಕೆಗೆ ಕೊಟ್ಟವರು ಯಾರು? ಕರಾವಳಿ ಕನ್ನಡಿಗರ ಪ್ರತೀಕವಾಗಿದ್ದ-ಲಾಭದಾಯಕವಾಗಿ ನಡೆಯುತ್ತಿದ್ದ ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ಗಳನ್ನು ಬೇರೆ ಬ್ಯಾಂಕ್ ಜತೆಗೆ ವಿಲೀನ ಮಾಡಿದ್ದು ಯಾರು?
ಪದ್ಮರಾಜ್ ಬಗ್ಗೆ ಅಭಿಪ್ರಾಯ?
ವಕೀಲ ವೃತ್ತಿಯಲ್ಲಿ ಹೆಸರು ಮಾಡಿ ರುವ ಅವರು ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಗಮನಿಸಿ ಜನರು ಈ ಬಾರಿ ಆಶೀರ್ವಾದ ಮಾಡಲಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಅವರು ಸರ್ವ ಧರ್ಮವನ್ನು ಪ್ರೀತಿಸುವವರು.