ಲಾಹೋರ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಲಾಹೋರ್ ನಿವಾಸಕ್ಕೆ ಗುರವಾರ ದೊಡ್ಡ ಸಂಖ್ಯೆಯ ಪೊಲೀಸರು ನುಗ್ಗಿದ್ದಾರೆ. ಅಲ್ಲಿ 30ರಿಂದ 40 ಉಗ್ರರು ಇದ್ದಾರೆ ಎಂದು ಪಾಕ್ ಸರ್ಕಾರ ಪ್ರತಿಪಾದಿಸುತ್ತಿದೆ. ಬೆಳಗ್ಗಿನಿಂದಲೇ ದೊಡ್ಡ ಸಂಖ್ಯೆಯಲ್ಲಿ ಪೊಲೀಸರು, ಅರೆಸೇನಾಪಡೆಯ ಯೋಧರು ಅಲ್ಲಿಗೆ ತೆರಳಿದ್ದಾರೆ. 24 ಗಂಟೆಯ ಗಡುವು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಿವಾಸವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್‌ಗಳನ್ನು ಹಾಕಿ, ಪೊಲೀಸರು ಬಂದ್ ಮಾಡಿದ್ದಾರೆ. ಜಾಮರ್‌ಗಳನ್ನು ಅಳವಡಿಸಿದ್ದಾರೆ.
ಪೂರ್ವ ಪಾಕಿಸ್ತಾನದ ಸ್ಥಿತಿ:
ಈ ಎಲ್ಲಾ ಬೆಳವಣಿಗೆಗಳ ನಡುವೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಇಮ್ರಾನ್ ಖಾನ್ ನಮ್ಮ ದೇಶಕ್ಕೆ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಅನುಭವಿಸಿದ್ದ ಸ್ಥಿತಿ ಬರಲಿದೆ. ಪಾಕಿಸ್ತಾನ ವಿಪತ್ತಿನತ್ತ ಸಾಗುತ್ತಿದೆ. ಹೀಗಾಗಿ, ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜಾಮೀನಿನಲ್ಲಿ ಬಿಡುಗಡೆಯಾಗಿದ್ದೇನೆ ಎಂದು ಹೇಳಿರುವ ಅವರು, ಗುರುವಾರಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಅಕೌಂಟಿಬಿಲಿಟಿ ಬ್ಯೂರೊ ನಡೆಸುವ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಲಿಖೀತ ಹೇಳಿಕೆಯನ್ನೂ ಬ್ಯೂರೋಗೆ ನೀಡಿದ್ದಾರೆ.
ಇತ್ತೀಚೆಗೆ ಪೊಲೀಸರು 25 ಮಂದಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಕೊಂದಿದ್ದಾರೆ. ಅದರ ವಿರುದ್ಧ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.