ಲಂಡನ್: ವಿಕೆಟ್ ಕಿತ್ತ ಕೂಡಲೇ ಎರಡೂ ಕೈಯಗಲಿಸಿ ಮೈದಾನದ ಮೂಲೆ ಮೂಲೆ ಓಡುತ್ತಿದ್ದ ಸ್ಪಿನ್ನರ್ ಇಮ್ರಾನ್ ತಾಹೀರ್ ಇನ್ನು ಮುಂದೆ ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಶನಿವಾರ ಆಸೀಸ್ ವಿರುದ್ಧದ ಪಂದ್ಯವೇ ತಾಹೀರ್ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯ.
ಇಲ್ಲಿಯವರೆಗೆ 105 ಏಕದಿನ ಪಂದ್ಯಗಳನ್ನಾಡಿರುವ ಇಮ್ರಾನ್ 172 ವಿಕೆಟ್ ಪಡೆದಿದ್ದಾರೆ. 45 ರನ್ ನೀಡಿ ಏಳು ವಿಕೆಟ್ ಪಡೆದಿರುವುದು ತಾಹೀರ್ ಜೀವನಶ್ರೇಷ್ಠ ಬೌಲಿಂಗ್.
1979ರಲ್ಲಿ ಪಾಕಿಸ್ಥಾನದ ಲಾಹೋರ್ ನಲ್ಲಿ ಜನಿಸಿದ್ದ ಮೊಹಮ್ಮದ್ ಇಮ್ರಾನ್ ತಾಹೀರ್, ಅಂಡರ್ 19 ಮತ್ತು ದೇಶೀಯ ಕ್ರಿಕೆಟ್ ಕೂಟಗಳಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸಿದ್ದರು. 2006ರಲ್ಲಿ ದಕ್ಷಿಣಾ ಆಫ್ರಿಕಾ ಮೂಲದ ಯುವತಿಯನ್ನು ಮದುವೆಯಾದ ನಂತರ ತಾಹೀರ್ ದಕ್ಷಿಣ ಆಫ್ರಿಕಾದ ಸದಸ್ಯತ್ವ ಪಡೆದರು.
2011ರ ವಿಶ್ವಕಪ್ ನಲ್ಲಿ ದ. ಆಫ್ರಿಕಾ ರಾಷ್ಟ್ರೀಯ ತಂಡವನ್ನು ಸೇರಿದ ಇಮ್ರಾನ್ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ತನ್ನ 32ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದ ತಾಹೀರ್ ಆಡಿದ ಕೆಲವೇ ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಮಿಂಚು ಹರಿಸಿದ್ದಾರೆ. 2011ರ ವಿಶ್ವಕಪ್ ನಲ್ಲಿ ಆಡಿದ ಐದು ಪಂದ್ಯದಲ್ಲಿ 14 ವಿಕೆಟ್ ಪಡೆದ ಇಮ್ರಾನ್, ದ.ಆಫ್ರಿಕಾ ಕ್ರಿಕೆಟ್ ನ ಸ್ಪಿನ್ ಗೆ ಹೊಸ ಭಾಷ್ಯ ಬರೆದರು.
40 ವರ್ಷದ ಇಮ್ರಾನ್ ತಾಹೀರ್, 2019ರ ವಿಶ್ವಕಪ್ ಆಡುತ್ತಿರುವ ಅತೀ ಹಿರಿಯ ಆಟಗಾರ. ಸೆಮಿ ಫೈನಲ್ ತಲುಪಲು ವಿಫಲವಾಗಿರುವ ದಕ್ಷಿಣ ಆಫ್ರಿಕಾ ಶನಿವಾರ ಆಸೀಸ್ ವಿರುದ್ದ ಕೊನೆಯ ಲೀಗ್ ಪಂದ್ಯವಾಡಲಿದೆ. ಇದೇ ಪಂದ್ಯ ಇಮ್ರಾನ್ ತಾಹೀರ್ ಗೆ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಲಿದೆ.
ಏಕದಿನ ಕ್ರಿಕೆಟ್ ನಲ್ಲಿ ತಾಹೀರ್ ದಾಖಲೆಗಳು
* ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ತಾಹೀರ್ ಬಳಿಯಿದೆ (39)
* ಏಕದಿನ ಕ್ರಿಕೆಟ್ ನಲ್ಲಿ ಏಳು ವಿಕೆಟ್ ಪಡೆದ ಮೊದಲ ದಕ್ಷಿಣ ಆಫ್ರಿಕಾದ ಬೌಲರ್.
* ದ. ಆಫ್ರಿಕಾ ಪರ ಅತೀ ಕಡಿಮೆ (58) ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಬೌಲರ್.