ಇಸ್ಲಾಮಾಬಾದ್/ಬೆಂಗಳೂರು: ಟಿಪ್ಪು ಸುಲ್ತಾನ್‌ನ 220ನೇ ಪುಣ್ಯತಿಥಿಯ ಅಂಗವಾಗಿ ಟಿಪ್ಪುವಿಗೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟ್ವಿಟರ್‌ನಲ್ಲಿ ಈ ವಿಷಯವನ್ನು ಬಹಿರಂಗ ಪಡಿಸುತ್ತಲೇ ಇತ್ತ ಬೆಂಗಳೂರಿನಲ್ಲಿÉ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ರವಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್, “ಇಂದು ಟಿಪ್ಪುವಿನ ಪುಣ್ಯತಿಥಿ. ಗುಲಾಮಗಿರಿಯಲ್ಲಿ ಬದುಕುವುದಕ್ಕಿಂತ ಯುದ್ಧಭೂಮಿಯಲ್ಲಿ ಹುತಾತ್ಮನಾಗುವುದೇ ಲೇಸು ಎಂಬ ಧ್ಯೇಯ ಹೊಂದಿದ್ದ ಆತನ ನಿಲುವನ್ನು ನಾನು ಎಂದೂ ಇಷ್ಟಪಡುತ್ತೇನೆ’ ಎಂದು ಹೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸಿದ್ದರಾಮಯ್ಯ ಕಾಲೆಳೆದರು. ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಿಸುವ ಮೂಲಕ ವಿವಾದಕ್ಕೀಡಾಗಿದ್ದ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, ಇಮ್ರಾನ್ ಖಾನ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ರಾಜೀವ್, ಸಿದ್ದರಾಮಯ್ಯನವರೇ, ಟಿಪ್ಪುವನ್ನು ಹೊಗಳಿದ್ದಕ್ಕಾಗಿ ಇಮ್ರಾನ್ ಖಾನ್ ಅವರನ್ನು ನೀವು ಬೇಗನೆ ಅಪ್ಪಿಕೊಳ್ಳಬೇಕು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಒಲುಮೆ ಗಳಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ಸಿಗದು’ ಎಂದರು.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಸಿದ್ದರಾಮಯ್ಯ, ರಾಜೀವ್ ಅವರೇ, ಟ್ವೀಟ್ ಮಾಡುವ ಮುನ್ನ ಸ್ವಲ್ಪ ಆಲೋಚಿಸಿ. ನಾನು ನಿಮ್ಮ ಚೋರ ನಾಯಕನಂತೆ ಶತ್ರುದೇಶದ ಪ್ರಧಾನಿ ಜತೆ ಬಿರಿಯಾನಿ ತಿಂದಿಲ್ಲ ಮತ್ತು ನಿಮ್ಮ ಸಿದ್ಧಾಂತಗಳನ್ನು ಬದಿಗೊತ್ತಿ ನಿಮ್ಮ ನಾಯಕರನ್ನು ಮೆಚ್ಚಿಸುವ ಉದ್ದೇಶದಿಂದ ಮಾಡುತ್ತಿರುವ ಅವಕಾಶವಾದಿ ರಾಜಕಾರಣ ಮಾಡುತ್ತಿಲ್ಲ. ನೀವು ಗುಲಾಮಗಿರಿ ಬಿಟ್ಟು ಟಿಪ್ಪುವಿನ ಧ್ಯೇಯದಂತೆ ಬಾಳಿರಿ’ ಎಂದಿದ್ದಾರೆ.