ಇಸ್ಲಾಮಾಬಾದ್: ತನ್ನ ವಿರುದ್ಧ ಕೋರ್ಟ್ ಮಾರ್ಷಲ್ ನಡೆಸಲು ಕೆಲವು ಮಾಸ್ಟರ್ ಮೈಂಡ್‌ಗಳು ಮತ್ತು ಸಂಚುಕೋರರು ಪ್ರಯತ್ನಿಸುತ್ತಿದ್ದಾರೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
“ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತನಾಗುವುದನ್ನು ಅರಿತಿದ್ದ ಇಮ್ರಾನ್ ಖಾನ್, ಮೇ 9ರಂದು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲು ಮೊದಲೇ ಸಂಚು ರೂಪಿಸಿದ್ದರು’ ಎಂದು ಪಾಕ್ ಆಂತರಿಕ ಸಚಿವ ರಾಣಾ ಸನಾಹುಲ್ಲಾ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ.
10 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ಹೈಕೋರ್ಟ್ ಎದುರು ಗುರುವಾರ ಇಮ್ರಾನ್ ಖಾನ್ ಹಾಜರಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲು ಸಂಚು ರೂಪಿಸಲಾಗುತ್ತಿದೆ. ಒಬ್ಬ ನಾಗರಿಕನ ವಿಚಾರಣೆಯನ್ನು ಮಿಲಿಟರಿ ನ್ಯಾಯಾಲಯದಲ್ಲಿ ನಡೆಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಪಾಕಿಸ್ತಾನದಲ್ಲಿ ನ್ಯಾಯದ ಅಂತ್ಯ’ ಎಂದು ದೂರಿದ್ದಾರೆ.
Related Articles
“ಮಿಲಿಟರಿ ನ್ಯಾಯಾಲಯದಲ್ಲಿ ನನ್ನ ವಿಚಾರಣೆ ಕಾನೂನಿಗೆ ವಿರುದ್ಧ. ನನ್ನ ವಿರುದ್ಧ ದಾಖಲಾಗಿರುವ 150ಕ್ಕೂ ಹೆಚ್ಚು ಪ್ರಕರಣಗಳು ಆಧಾರರಹಿತ. ಈ ಪ್ರಕರಣಗಳಲ್ಲಿ ಶಿಕ್ಷೆ ನೀಡಲು ಕಾನೂನಿನಲ್ಲಿ ಸಾಧ್ಯವಿಲ್ಲ ಎಂಬುದನ್ನು ತಿಳಿದೇ, ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸಂಚು ರೂಪಿಸಲಾಗುತ್ತಿದೆ’ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.
13 ಮಹಿಳಾ ಕಾರ್ಯಕರ್ತರ ಕಸ್ಟಡಿಗೆ ನಕಾರ
ಲಾಹೋರ್‌ನ ಐತಿಹಾಸಿಕ ಜಿನ್ಹಾ ಹೌಸ್ ಮೇಲೆ ಮೇ 9ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಬೆಂಬಲಿಗರಾದ ಬಂಧಿತ 13 ಮಹಿಳೆಯರ ಪೊಲೀಸ್ ಕಸ್ಟಡಿಯ ಅವಧಿಯ ವಿಸ್ತರಣೆಗೆ ಲಾಹೋರ್‌ನ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ನಿರಾಕರಿಸಿದೆ. ಇದೇ ವೇಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಂಧಿತ 13 ಮಹಿಳಾ ಪಿಟಿಐ ಕಾರ್ಯಕರ್ತರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.
ಮೇ 9ರಂದು ಜಿನ್ಹಾ ಹೌಸ್ ಮತ್ತು ಲಾಹೋರ್ ಕಾಪ್ಸ್ì ಕಮಾಂಡರ್ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಬಳಸಿ ದಾಳಿ ನಡೆಸಲಾಯಿತು. ಹಾಗಾಗಿ ಪೆಟ್ರೋಲ್ ಬಾಂಬ್‌ಗಳ ವಶಕ್ಕೆ ಅವರನ್ನು ಕೆಲವು ದಿನಗಳ ಕಾಲ ಪುನಃ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ತನಿಖಾಧಿಕಾರಿ ಕೋರಿದರು. ಆದರೆ ಈ ಹಿಂದೆ ಅರ್ಜಿಯಲ್ಲಿ ಈ ವಿಷಯವನ್ನು ನಮೂದಿಸದೇ ಇರುವುದರಿಂದ ಕೋರ್ಟ್ ಕೋರಿಕೆಯನ್ನು ನಿರಾಕರಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಬಂಧಿತರ ಪೈಕಿ ಮಾಜಿ ಸಂಸದೆ ಆಲಿಯಾ ಹಮ್ಜಾ ಕೂಡ ಸೇರಿದ್ದಾರೆ.
ಪಾಕಿಸ್ತಾನದಲ್ಲಿ ಕೇಂದ್ರ ಬಜೆಟ್ ಮಂಡನೆ:
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ, ಅಗತ್ಯ ವಸ್ತುಗಳ ಪೂರೈಕೆ ಮತ್ತು ಐಎಂಎಫ್ನಿಂದ ಸಾಲ ಪಡೆಯುವುದನ್ನು ಕೇಂದ್ರೀಕರಿಸಿಕೊಂಡು ಶುಕ್ರವಾರ ಕೇಂದ್ರ ಬಜೆಟ್ ಮಂಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಚೇತರಿಕೆಯನ್ನು ಗಮನದಲ್ಲಿಟ್ಟುಕೊಂಡು ಪಾಕ್ ಸಂಸತ್‌ನಲ್ಲಿ ಹಣಕಾಸು ಸಚಿವ ಇಶಾಕ್ ದಾರ್ ಬಜೆಟ್ ಮಂಡಿಸಿದರು.