ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಕಾನೂನು ಸಂಕಟದಿಂದ ಸದ್ಯಕ್ಕೆ ಪಾರಾಗಿದ್ದಾರೆ. ಎಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಜೂ.8ರವರೆಗೆ ಅವರಿಗೆ ಪಾಕ್ ಉಗ್ರ ನಿಗ್ರಹ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾ.18ರಂದು ಇಸ್ಲಾಮಾಬಾದ್‌ನ ಕೋರ್ಟ್ ಆವರಣದಲ್ಲಿ ಪಿಟಿಐ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಉಂಟಾದ ಘರ್ಷಣೆಯಲ್ಲಿ 25ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ಸಂಬಂಧ ಇಸ್ಲಾಮಾಬಾದ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಪ್ರಧಾನಿಯಾಗಿದ್ದಾಗ ಪಡೆದ ಕಾಣಿಕೆಗಳನ್ನು ಮಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಆಗಮಿಸಿದ್ದರು. ಮಂಗಳವಾರ ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಆಗಮಿಸಿದ ಇಮ್ರಾನ್, ಉಗ್ರ ನಿಗ್ರಹ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಖುದ್ದು ಹಾಜರಾದರು.
ಎರಡೂ ಕಡೆಯ ನ್ಯಾಯವಾದಿಗಳ ವಾದ ಆಲಿಸಿದ ನ್ಯಾಯಾಲಯ, ಎಂಟು ಪ್ರಕರಣಗಳಲ್ಲೂ ಜೂ.8ರವರೆಗೆ ಪಿಟಿಐ ಅಧ್ಯಕ್ಷರಿಗೆ ಜಾಮೀನು ನೀಡಿತು.