Advertisement

10 ವರ್ಷ ಜೈಲಿನಲ್ಲಿಡಲು ಸೇನೆ ಸಂಚು: ಕೊನೆ ಉಸಿರಿರುವವರೆಗೂ ಹೋರಾಡಲು ಇಮ್ರಾನ್‌ ಶಪಥ

11:39 PM May 15, 2023 | Team Udayavani |

ಲಾಹೋರ್‌: ಬಂಧನ, ಜಾಮೀನು, ಬಿಡುಗಡೆಯ ಹೈಡ್ರಾಮಾದ ಬಳಿಕ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಪಾಕ್‌ ಸೇನೆಯ ವಿರುದ್ಧದ ವಾಗ್ಧಾಳಿಯನ್ನು ಮುಂದುವರಿಸಿದ್ದಾರೆ. “ದೇಶದ ಬಲಿಷ್ಠ ಸೇನೆಯು ದೇಶದ್ರೋಹದ ಆರೋಪದಲ್ಲಿ ನನ್ನನ್ನು ಮುಂದಿನ 10 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಸಬೇಕೆಂದು ಉದ್ದೇಶಿಸಿತ್ತು. ಆದರೆ ನಾನು ನನ್ನ ಕೊನೆಯ ರಕ್ತದ ಹನಿಯವರೆಗೂ ಈ ವಂಚಕರ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡುತ್ತಿದ್ದೇನೆ’ ಎಂದು ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

Advertisement

ಕಳೆದ ವಾರ ಇಮ್ರಾನ್‌ ಬಂಧನದ ಬೆನ್ನಲ್ಲೇ ನಡೆದ ಹಿಂಸಾಚಾರದ ವೇಳೆ ಸೇನಾಧಿಕಾರಿಗಳ ಮನೆ ಮೇಲಿನ ದಾಳಿ ಪ್ರಕರಣ ಸಂಬಂಧ ಲಾಹೋರ್‌ ಹೈಕೋರ್ಟ್‌ಗೆ ಹಾಜರಾಗುವ ಮುನ್ನ ಖಾನ್‌ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಈಗ ಲಂಡನ್‌ನ ಸಂಪೂರ್ಣ ಪ್ಲ್ರಾನ್‌ ಹೊರಬಿದ್ದಿದೆ.  ನಾನು ಜೈಲಿನಲ್ಲಿರುವಂತೆಯೇ, ಹಿಂಸಾಚಾರದ ಹೆಸರಲ್ಲಿ

ನನ್ನ ಪತ್ನಿಯನ್ನೂ ಜೈಲಿಗೆ ತಳ್ಳಿ, ದೇಶದ್ರೋಹದ ಕೇಸಿನಲ್ಲಿ ನನ್ನನ್ನು ಮುಂದಿನ 10 ವರ್ಷ ಜೈಲಲ್ಲೇ ಇರುವಂತೆ ಮಾಡುವುದು ಸೇನೆಯ ಯೋಜನೆಯಾಗಿತ್ತು ಎಂದು ಖಾನ್‌ ಟ್ವೀಟ್‌ ಮೂಲಕ  ಆರೋಪಿಸಿದ್ದಾರೆ.

ಇದೇ ವೇಳೆ ಖಾನ್‌ರನ್ನು ಹೈಕೋರ್ಟ್‌ ಆವರಣದಿಂದಲೇ ಅಪಹರಿಸಿ ಕರೆದೊಯ್ದ ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಕೇಸು ದಾಖಲಿಸಲು ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ ಪಕ್ಷ ನಿರ್ಧರಿಸಿದೆ. ಅಲ್ಲದೆ ಖಾನ್‌ ಬಂಧನ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಗೋಲಿಬಾರ್‌ ಮಾಡಿದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆಯೂ ಆಗ್ರಹಿಸಲಾಗುವುದು ಎಂದು ಪಕ್ಷ ತಿಳಿಸಿದೆ.

ಇನ್ನೊಂದೆಡೆ ಹಲವಾರು ಪ್ರಕರಣಗಳಲ್ಲಿ ಇಮ್ರಾನ್‌ ಖಾನ್‌ಗೆ ಸಂಪೂರ್ಣ ರಿಲೀಫ್ ನೀಡಲಾಗಿದೆ ಎಂದು ಆರೋಪಿಸಿ ಪಾಕ್‌ ಸುಪ್ರೀಂ ಕೋರ್ಟ್‌ ಸೇರಿದಂತೆ ನ್ಯಾಯಾಂಗದ ವಿರುದ್ಧ ಆಡಳಿತಾರೂಢ ಪಕ್ಷದ ಮಿತ್ರ ಪಕ್ಷ ಜಮೀಯತ್‌ ಉಲೆಮಾ ಇ ಇಸ್ಲಾಂ ಫ‌ಜ್‌ ಕಾರ್ಯಕರ್ತರು ಇಸ್ಲಾಮಾಬಾದ್‌ನಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ.

Advertisement

ಪತ್ನಿಗೆ ಜಾಮೀನು: ಈ ಎಲ್ಲ ಬೆಳವಣಿಗೆಗಳ ನಡುವೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಸೋಮವಾರ ವಿಚಾರಣೆಗೆ ಹಾಜರಾ­ಗಿ­ದ್ದಾರೆ. ಮಂಗಳವಾರ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್‌ ಒಪ್ಪಿಕೊಂಡಿದೆ. ಜತೆಗೆ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಮಾ.23ರ ವರೆಗೆ ಜಾಮೀನು ಸಿಕ್ಕಿದೆ.

ಸುಪ್ರೀಂ ಕೋರ್ಟ್‌ ಎದುರು ಹೈಡ್ರಾಮಾ
ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪರವಾಗಿ ಸುಪ್ರೀಂ ಕೋರ್ಟ್‌ ನಿಲುವು ಹೊಂದಿದೆ ಎಂದು ಆರೋಪಿಸಿ ಪಾಕಿಸ್ಥಾನದ ಆಡಳಿತ ಮೈತ್ರಿಕೂಟ ಪಾಕಿಸ್ಥಾನ ಡೆಮಾಕ್ರಾಟಿಕ್‌ ಮೂವ್‌ಮೆಂಟ್‌ (ಪಿಡಿಎಂ)ನ ಪಕ್ಷಗಳ ನಾಯಕರು ಮತ್ತು ಸದಸ್ಯರು ಸುಪ್ರೀಂ ಕೋರ್ಟ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಿಗಿ ಬಂದೋಬಸ್ತ್ ನಡುವೆಯೂ ಕೂಡ ಮೈತ್ರಿಕೂಟ ಪಕ್ಷಗಳ ಕೆಲವು ಕಿಡಿಗೇಡಿ ಸದಸ್ಯರು ಗೇಟುಗಳನ್ನು ಏರಿ ಆವರಣ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ. ಸೆಕ್ಷನ್‌ 144 ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ. ಇದಲ್ಲದೆ ಪಾಕಿಸ್ಥಾನದ ಸಂಸತ್‌ ನ್ಯಾಶನಲ್‌ ಅಸೆಂಬ್ಲಿಯಲ್ಲಿ ಕೂಡ ಸುಪ್ರೀಂ ಕೋರ್ಟ್‌ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.

ಇಮ್ರಾನ್‌ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ನ್ಯಾಯಮೂರ್ತಿಗಳಿಗೆ ಮಾಜಿ ಪ್ರಧಾನಿ ಬಗ್ಗೆ ಅಕ್ಕರೆ ಇದ್ದರೆ ಅವರ ಪಕ್ಷ ಸೇರಿಕೊಳ್ಳಲಿ. ರಾಷ್ಟ್ರವೇ ಖಾನ್‌ ಅವರ ಪಕ್ಷದವರ ಕೃತ್ಯದಿಂದ ತಲೆತಗ್ಗಿಸುವಂತಾಗಿದೆ.
-ರಾಜಾ ರಿಯಾಜ್‌ ಅಹ್ಮದ್‌ ಖಾನ್‌, ಪಾಕ್‌ನ ಮುಖಂಡ

 

Advertisement

Udayavani is now on Telegram. Click here to join our channel and stay updated with the latest news.

Next