Advertisement

ಪಾಕ್‌ ಸೇನೆ ವಿರುದ್ಧ ಮುಗಿಬಿದ್ದ ಇಮ್ರಾನ್‌ 

10:21 PM May 14, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನ ಸೇನೆ ವಿರುದ್ಧ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ತಿರುಗಿಬಿದ್ದಿದ್ದಾರೆ. ತನ್ನ ಎಲ್ಲಾ ಪ್ರಕರಣಗಳಲ್ಲಿ ಇಸ್ಲಾಮಾಬಾದ್‌ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದ ಅವರು, ಲಾಹೋರ್‌ನ ಜಮಾನ್‌ ಪಾರ್ಕ್‌ನಲ್ಲಿರುವ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

Advertisement

“ನಾನು ಪಾಕಿಸ್ತಾನ ಕ್ರಿಕೆಟ್‌ ತಂಡದ ಪರ ವಿಶ್ವಮಟ್ಟದಲ್ಲಿ ಆಡುತ್ತಿದ್ದಾಗ, ನೀವಿನ್ನೂ ಹುಟ್ಟಿರಲಿಲ್ಲ” ಎಂದು ಮೇಜರ್‌ ಜನರಲ್‌ ಅಹ್ಮದ್‌ ಶರೀಫ್ ಚೌಧರಿ ವಿರುದ್ಧ ಕಿಡಿಕಾರಿದ್ದಾರೆ. “ರಾಜಕೀಯ ಮಾಡುವ ಬದಲು ಪಾಕ್‌ ಸೇನೆಯು ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕು. ಸಂಪೂರ್ಣ ಅವ್ಯವಸ್ಥೆಯಿಂದ ದೇಶವನ್ನು ರಕ್ಷಿಸಲು ಪಾಕ್‌ ಸೇನೆಯು ವಿಶಾಲವಾಗಿ ಯೋಚಿಸಬೇಕಿದೆ” ಎಂದು ಸಲಹೆ ನೀಡಿದ್ದಾರೆ.

“ಪಿಟಿಐ ಪಕ್ಷದ ಕುರಿತು ತನ್ನ ವಿರೋಧಿ ನಿಲುವನ್ನು ಸೇನೆಯ ನಾಯಕತ್ವ ಬದಲಿಸಿಕೊಳ್ಳಬೇಕು. ಈಗಾಗಲೇ ಸೇನೆಯ ಕ್ರಮಗಳು ದೇಶವನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿದೆ. ಎಲ್ಲಾ ಪ್ರಕರಣಗಳಲ್ಲಿ ನನಗೆ ನ್ಯಾಯಾಲಯದಿಂದ ಜಾಮೀನು ದೊರೆತ ಹೊರತಾಗಿಯೂ ಪಾಕಿಸ್ತಾನದ ಆಮದು ಸರ್ಕಾರ ನನ್ನನ್ನು ಅಪಹರಣ ಮಾಡಿ, ಕೆಲ ಗಂಟೆಗಳ ಕಾಲ ಕೂಡಿ ಹಾಕಿತ್ತು’ ಎಂದು ಆರೋಪಿಸಿದ್ದಾರೆ.

ಬಾಜ್ವಾ ವಿರುದ್ಧ ಸಿಟ್ಟು: “ಪಾಕ್‌ ಸೇನೆ ಮಾಜಿ ಮುಖ್ಯಸ್ಥ ಜನರಲ್‌ ಕಮರ್‌ ಜಾವೇದ್‌ ಬಾಜ್ವಾ ನನ್ನ ಬೆನ್ನಿಗೆ ಇರಿದರು ಹಾಗೂ ಪಾಕಿಸ್ತಾನದ ಭ್ರಷ್ಟಾಚಾರಿಗಳು ಅಧಿಕಾರಕ್ಕೆ ಬರುವಂತೆ ಮಾಡಿದರು. ನಾನು ಅಧಿಕಾರದಲ್ಲಿದ್ದಾಗ ಸೇನೆಯ ಮೇಲೆ ಜನರು ಗೌರವ ತಾಳಿದ್ದರು. ಇದೀಗ ನಾಗರಿಕರು ಪಾಕ್‌ ಸೇನೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದಕ್ಕೆ ಸೇನಾ ಮುಖ್ಯಸ್ಥರೇ ಹೊಣೆಗಾರರು’ ಎಂದು ದೂರಿದ್ದಾರೆ.

“ಪಾಕ್‌ ಸೇನೆಯು ಪಿಟಿಐನ ಪ್ರಮುಖ ನಾಯಕರನ್ನು ಹಾಗೂ 3,500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಜೈಲಿಗೆ ಹಾಕಿದೆ. ಯಾರೋ ಅಪರಿಚಿತರು ಸರ್ಕಾರಿ ಕಚೇರಿಗಳ ಮೇಲೆ ನಡೆಸಿದ ದಾಳಿಗೆ ಅವರನ್ನು ಬಂಧಿಸಲಾಗಿದೆ. ರಾಜಕೀಯ ಪಕ್ಷಗಳಿಗೆ ಚುನಾವಣೆ ಬೇಕಿಲ್ಲ. ಏಕೆಂದರೆ ಅವರಿಗೆ ಸೋಲಿನ ಭಯವಿದೆ” ಎಂದು ಹೇಳಿದ್ದಾರೆ.

Advertisement

ಸರ್ಕಾರದಿಂದ ಅಪಹರಣ: “ಹಿರಿಯ ಪತ್ರಕರ್ತ ಇಮ್ರಾನ್‌ ರಿಯಾಜ್‌ ಖಾನ್‌ ಅವರನ್ನು ಭದ್ರತಾ ಪಡೆಗಳು ಅಪಹರಿಸಿವೆ. ಅವರಿಗೆ ತೀವ್ರ ಹಿಂಸೆ ನೀಡಿರಬಹುದು ಅಥವಾ ಅವರ ಹತ್ಯೆ ಮಾಡಿರಬಹುದು. ಅಲ್ಲದೇ ಹಿರಿಯ ರಾಜಕಾರಣಿ ಒರಿಯಾ ಮಕುºಲ್‌ ಜಾನ್‌ ಅವರನ್ನು ಪಾಕ್‌ ಸರ್ಕಾರವೇ ಅಪಹರಣ ಮಾಡಿಸಿದೆ’ ಎಂದು ಇಮ್ರಾನ್‌ ಆರೋಪಿಸಿದ್ದಾರೆ.

“ಪಿಟಿಐ ಕಾರ್ಯಕರ್ತರು ರಾಜಕೀಯ ಭಯೋತ್ಪಾದಕರು”
“ಪಿಟಿಐ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರ ಬೆಂಬಲಿಗರು ರಾಜಕೀಯ ಭಯೋತ್ಪಾದಕರಾಗಿದ್ದಾರೆ. ಅವರು ಪ್ರತಿಭಟನೆ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಹಿಂಸಾಚಾರ ನಡೆಸಿದ್ದಾರೆ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯು ಅಗತ್ಯಕ್ಕಿಂತ ಹೆಚ್ಚು ರಾಜಕೀಯಗೊಳ್ಳುತ್ತಿದೆ’ ಎಂದು ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ದೂರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next