ಬಾಗೇಪಲ್ಲಿ: ಮಹಿಳಾ ಸಬಲೀಕರಣ ಮತ್ತು ಉಳಿತಾಯ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಥಾಪಿಸಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಲ್ಲಿ ಹಲವು ಮಂದಿ ಇನ್ನೂ ಅನಕ್ಷರಸ್ಥರಾಗಿಯೇ ಉಳಿದಿರುತ್ತಾರೆ. ಇವರನ್ನು ಸಾಕ್ಷರರನ್ನಾಗಿ ಮಾಡುವುದು ಮತ್ತು ಆರ್ಥಿಕ ಸಾಕ್ಷರತೆ ಒದಗಿಸುವುದರಿಂದ ಅವರ ಜೀವನ ಮಟ್ಟ ಸುಧಾರಣೆ ಆಗುತ್ತದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನಾಜೀಮಾ ಖಾತೂನ್ ತಿಳಿಸಿದರು.
ಗುರುವಾರ ಪಟ್ಟಣದ ಅಂಬೇಡ್ಕರ್ ನಗರದ ಕೊಳಚೆ ಪ್ರದೇಶದಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಪಂ, ತಾಪಂ ಆಶ್ರಯದಲ್ಲಿ ಏರ್ಪಡಿಸಿದ್ದ ಬೋಧಕರ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದಾrಟಿಸಿ ಮಾತನಾಡಿದರು. ಡಾ.ನಂಜುಂಡಪ್ಪ ವರದಿಯನ್ವಯ ತಾಲೂಕಿನ ಎಲ್ಲಾ 25 ಗ್ರಾಪಂಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾಲೂಕಿನಲ್ಲಿ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದ್ದು ಉಳಿದ ಶೇ.30ರಷ್ಟು ಅನಕ್ಷರತೆ ಹೋಗಲಾಡಿಸಬೇಕಾಗಿದೆ. ತಾಲೂಕಿನಲ್ಲಿ ಅನೇಕ ಗ್ರಾಪಂ ಸದಸ್ಯರು ಕೂಡ ಅನಕ್ಷರಸ್ಥರಾಗಿದ್ದಾರೆ. ಇಂತಹವರನ್ನು ಗುರುತಿಸಿ ಸಾಕ್ಷರರನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ. ಸಾಮಾನ್ಯವಾಗಿ ಪರಿಶಿಷ್ಟ ಜಾತಿ, ಪಂಗಡದ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದ ನಿರ್ವಹಣಾಧಿಕಾರಿ ಆರ್.ಸಿ.ರೆಡ್ಡಪ್ಪ ಮಾತನಾಡಿ, ನೀವು ಅನಕ್ಷರಸ್ಥರಾದರೆ ನಿಮ್ಮನ್ನು ಮೋಸ ಮಾಡುವ ಜನರು ಹೆಚ್ಚಾಗಿರುತ್ತಾರೆ.ನೀವು ಅಕ್ಷರಸ್ಥರಾದರೆ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಲು ಜತೆಗೆ ಕಂದಾಯ, ವಿದ್ಯುತ್ ಬಿಲ್ ಪಾವತಿ ಮಾಡಲು ಸಹಾಯವಾಗುತ್ತದೆ. ನೀವು ಹೆಬ್ಬೆಟ್ಟು ಒತ್ತುವುದನ್ನು ಬಿಟ್ಟು ಸಹಿ ಮಾಡಲು ಓದಲು ಬರೆಯಲು ಬಂದರೆ ಸಾಕು ನಿಮ್ಮ ಜೀವನ ಸುಖಮಯವಾಗಲಿದೆ ಎಂದರು.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ರಾಜ್ಯ ಸಂಪನ್ಮೂಲ ವ್ಯಕ್ತಿ ತ್ರೀಭವನೇಶ್ವರಿ, ತಾಲೂಕು ಸಂಯೋಜಕ ಎನ್.ಶಿವಪ್ಪ,ಶ್ರೇಷ್ಠ ಸ್ವಯಂ ಸೇವಾ ಸಂಸ್ಥೆಯ ಬ್ರಹ್ಮಾನಂದರೆಡ್ಡಿ, ತರಬೇತಿದಾರರಾದ ಗಂಗುಲಪ್ಪ, ಕಾಂತಮ್ಮ, ಕದಿರಪ್ಪ ಮತ್ತಿತರರು ಉಪಸ್ಥಿತರಿದ್ದರು.