ನವದೆಹಲಿ : ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಮ್ಮ ಸಮಾಜ ವಿವಾಹ ಎನ್ನುವ ಭದ್ರ ಅಡಿಪಾಯದಿಂದಲೇ ನಿರ್ಮಾಣವಾಗಿದೆ. ಇದರ ನಡುವೆ ಮದುವೆಯಾದ ಮಹಿಳೆಯರ ಮೇಲೆ ಅನ್ಯಾಯದ ಪ್ರಕರಣಗಳು, ಕಿರುಕುಳ ಪ್ರಕರಣಗಳು ದಾಖಲಾಗಿವೆ. ಇಂತಹ ಕೇಸುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಾನೂನುಗಳನ್ನು ತರಲಾಗಿದೆ. ಹಾಗಾದ್ರೆ ಮಹಿಳೆಯ ರಕ್ಷಣೆಗೆ ಇರುವ ಕಾನೂನಾತ್ಮಕ ಹಕ್ಕುಗಳು ಯಾವುವು ಎಂಬುದನ್ನ ಇಲ್ಲಿ ನೋಡೋಣ
ಗಂಡನ ಮನೆಯಲ್ಲೇ ಇರುವ ಹಕ್ಕು : ಮದುವೆಯ ನಂತರ ಗಂಡ ಸತ್ತು ಹೋದರೆ, ವಿವಾಹ ವಿಚ್ಛೇದನವಾದರೆ, ತಾನು ಬೇರೊಂದು ಮನೆಯನ್ನು ನೋಡಿಕೊಳ್ಳುವ ತನಕ ಗಂಡನ ಮನೆಯಲ್ಲೇ ಇರುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ. ಅಥವಾ ಅವಳು ಅದೇ ಮನೆಯಲ್ಲಿಯೇ ಇರಬೇಕು ಎಂದು ಬಯಸಿದರೆ, ಮದುವೆಯಾದ ಮನೆಯಲ್ಲೇ ವಾಸಿಸಬಹದು.
ವಿಚ್ಛೇದನ ಪಡೆಯುವ ಹಕ್ಕು : ಹಿಂದೂ ವಿವಾಹ ಕಾಯಿದೆ 1995ರ ಪ್ರಕಾರ ಗಂಡನಿಂದ ಮಾನಸಿಕವಾಗಿ, ದೈಹಿಕವಾಗಿ ಹಲ್ಲೆಗೊಳಗಾದರೆ, ಹಿಂಸೆ ಅನುಭವಿಸುತ್ತಿದ್ದರೆ ಮಹಿಳೆಯು ವಿಚ್ಛೇದನವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾಳೆ. IPC ಸೆಕ್ಷನ್ 125 ಪ್ರಕಾರ ಮಹಿಳೆಯು ಗಂಡನಿಂದ ಆರ್ಥಿಕ ನೆರವನ್ನೂ ಪಡೆಯಬಹುದು.
ಸ್ತ್ರೀಧನ ಹಕ್ಕು : ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರ ಸೆಕ್ಷನ್ 14 ಮತ್ತು ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 27ರ ಪ್ರಕಾರ ಮಹಿಳೆಯೊಬ್ಬರಿಗೆ ‘ಸ್ತ್ರೀಧನ’ಗೆ ಏಕಮಾತ್ರ ಮಾಲೀಕರಾಗಬಹುದು. ಮದುವೆ ಅಥವಾ ಇನ್ಯಾವುದೇ ಸಮಯದಲ್ಲಿ ಮಹಿಳೆಗೆ ಬರುವ ಉಡುಗೊರೆ ಸೇರಿದಂತೆ ಹಣ, ಆಸ್ತಿ ಮೇಲೆ ಆ ಮಹಿಳೆಯೇ ಅಧಿಕಾರ ಹೊಂದಿರುತ್ತಾಳೆ.
ಮಗುವನ್ನು ತನ್ನಲ್ಲಿಯೇ ಸಾಕುವ ಹಕ್ಕು : ಮದುವೆಯಾಗಿ ಮಗುವಾದ ನಂತ್ರ ಗಂಡ ಹೆಂಡತಿ ದೂರವಾದರೆ ಆ ಮಗುವನ್ನು ತನ್ನಲ್ಲಿಯೇ ಸಾಕಿಕೊಳ್ಳುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ. ಆ ಮಗು 5 ವರ್ಷದೊಳಗಿದ್ದರೆ ತಾಯಿ ಬಳಿಯೇ ಬೆಳೆಯಬೇಕು ಎಂದು ಕಾನೂನು ಇದೆ.
ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು : ಮಹಿಳೆಯು ತಾನು ಗರ್ಭಿಣಿಯಾದ 24 ವಾರದೊಳಗೆ ಮಗುವು ನನಗೆ ಬೇಡ ಎಂದೆನಿಸಿದರೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ಇದಕ್ಕೆ ಗಂಡನನ್ನಾಗಲೀ ಅಥವಾ ಗಂಡನ ಮನೆಯವರ ಒಪ್ಪಿಗೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯಿದೆ, 1971 ಹೇಳಿದೆ.
ಆಸ್ತಿ ಪಡೆಯುವ ಹಕ್ಕು : ಹಿಂದೂ ಉತ್ತರಾಧಿಕಾರ ಕಾಯ್ದೆ 2005 ರ ತಿದ್ದುಪಡಿ ಪ್ರಕಾರ ವಿವಾಹಿತ ಮಹಿಳೆಯು ತನ್ನ ತಂದೆಯ ಆಸ್ತಿಯಲ್ಲೂ ಪಾಲುದಾರಳಾಗಿರುತ್ತಾಳೆ. ಅಲ್ಲದೆ ತನ್ನ ಪತಿಯು ವಿಚ್ಛೇದನ ನೀಡದೆ ಮತ್ತೊಂದು ಮದುವೆಯಾದ್ರೆ ಪತಿಯ ಎಲ್ಲಾ ಆಸ್ತಿಯೂ ಆ ಮಹಿಳೆಗೆ ಸೇರುತ್ತದೆ.
ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡುವ ಹಕ್ಕು : ಕೌಟುಂಬಿಕ ಹಿಂಸಾಚಾರ ಕಾಯ್ದೆ, 2005 ರ ಅಡಿಯಲ್ಲಿ ಮಹಿಳೆಯರು ರಕ್ಷಣೆ ಕೋರಿ ದೂರು ನೀಡುವ ಹಕ್ಕನ್ನು ಹೊಂದಿದ್ದಾರೆ. ಮಾನಸಿಕವಾಗಿ ಅಥವಾ ದೈಹಿಕವಾಗಿ ಗಂಡನ ಮನೆಯಲ್ಲಿ ಹಿಂಸೆ ನೀಡಿದರೆ ಇದರ ವಿರುದ್ಧ ದೂರು ನೀಡಬಹುದು.
ವರದಕ್ಷಿಗೆ ವಿರುದ್ಧ ದೂರು ನೀಡುವ ಹಕ್ಕು : ವರದಕ್ಷಿಣೆ ನಿಷೇಧ ಕಾಯ್ದೆ 1961. ಸೆಕ್ಷನ್ 304 ಬಿ ಮತ್ತು 498 ಎ ಅನ್ವಯ ವಿವಾಹಿತ ಮಹಿಳೆಯು ದೂರು ನೀಡುವ ಹಕ್ಕನ್ನು ಹೊಂದಿದ್ದಾಳೆ.