Advertisement
ಅಧಿಕಾರಿಗಳು ಗ್ರಾಮಕ್ಕೆ ನೀರು ಕೊಡುತ್ತೇವೆ ಎಂದರೂ ಗ್ರಾಮಸ್ಥರು ಒಪ್ಪಿಕೊಳ್ಳುತ್ತಿಲ್ಲ. ನೇತ್ರಾವತಿ ನದಿ ಕಿನಾರೆಯಲ್ಲೇ ವಿಸ್ತರಿಸಿಕೊಂಡಿರುವ ಸಜೀಪಮುನ್ನೂರು ಗ್ರಾಮವು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ನಮ್ಮ ಗ್ರಾಮದಿಂದಲೇ ಇತರ ಗ್ರಾಮಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿದ್ದರೂ ನಮಗೆ ನೀರು ನೀಡುತ್ತಿಲ್ಲ ಎಂಬುದು ಸ್ಥಳೀಯರ ವಾದ.
ಪ್ರಸ್ತುತ ನೂತನ ಕುಡಿಯುವ ನೀರಿನ ಯೋಜನೆಯಲ್ಲಿ ಸಜೀಪಮುನ್ನೂರು ಸೇರಿದಂತೆ ಬಂಟ್ವಾಳ ಕ್ಷೇತ್ರದ 5 ಗ್ರಾಮಗಳು ಸೇರಿದೆ ಎಂದು ಹೇಳಿದರೂ ಸ್ಥಳೀಯರು ಅದನ್ನುಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಕೆಲವು ಬೇಡಿಕೆಗಳನ್ನು ನಿಗಮದ ಮುಂದಿಟ್ಟಿದ್ದಾರೆ.
Related Articles
Advertisement
ಇಲ್ಲದೇ ಇದ್ದರೆ ಸಜೀಪಮುನ್ನೂರಿನಲ್ಲೇ ಪ್ರತ್ಯೇಕ ಶುದ್ಧೀಕರಣ ಘಟಕ ಮಾಡುವಂತೆ ಆಗ್ರಹಿಸಿದ್ದಾರೆ. ಜತೆಗೆ ಪೈಪ್‌ಲೈನ್‌ಗೆ ಅಗೆಯುವ ವೇಳೆ ರಸ್ತೆ ಚರಂಡಿಗೆ ಹಾನಿಯಾದರೆ ಅದನ್ನು ನಿಗಮವೇ ದುರಸ್ತಿ ಮಾಡಬೇಕು ಎಂಬುದು ಗ್ರಾ.ಪಂ.ನ ವಾದ.
ಆದರೆ ಈ ಬೇಡಿಕೆಯನ್ನು ಒಪ್ಪಿಕೊಳ್ಳುವುದಕ್ಕೆ ನಿಗಮದ ಅಧಿಕಾರಿಗಳು ಸಿದ್ಧವಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ ನಮ್ಮ ಯೋಜನೆಯಲ್ಲಿ ಮುಡಿಪಿನಲ್ಲಿ ಶುದ್ಧೀಕರಣ ಘಟಕಕ್ಕೆ ಮಾತ್ರ ಅವಕಾಶವಿದೆ. ಜತೆಗೆ ಮೊದಲ ಹಂತದಲ್ಲಿ ಶುದ್ಧೀಕರಣ ಘಟಕಕ್ಕೆ ನೀರು ಪೂರೈಕೆ ಮಾಡುವ ಪೈಪುಲೈನ್ ಮಾತ್ರ ಹಾಕಲಾಗುತ್ತದೆ ಎನ್ನುತ್ತಾರೆ.
5 ಗ್ರಾ.ಪಂ.ಗಳ ಸೇರ್ಪಡೆಕುಡಿಯುವ ನೀರು ಪೂರೈಕೆಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಯ ಜತೆಗೆ ಪ್ರಸ್ತುತ ಬಂಟ್ವಾಳ ವ್ಯಾಪ್ತಿಯ ಸಜೀಪಮುನ್ನೂರು, ಸಜೀಪಮೂಡ, ವೀರಕಂಭ, ಬೋಳಂತೂರು ಹಾಗೂ ಮಂಚಿ ಗ್ರಾಮಗಳು ಸೇರ್ಪಡೆಯಾಗಿವೆ. ಈ ರೀತಿ ಒಟ್ಟು 25 ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದು, ಅದಕ್ಕಾಗಿ ಸರ್ವೇ ನಡೆಸಿ ಡಿಪಿಆರ್ ಸಿದ್ಧಪಡಿಸಲು ಈಗಾಗಲೇ 30 ಲಕ್ಷ ರೂ.ಗಳನ್ನು ಸಂಬಂಧಪಟ್ಟ ನಿಗಮಕ್ಕೆ ಪಾವತಿಸಬೇಕಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗದ ಎಇಇ ಸಿ.ಮಹೇಶ್ ಅವರು ತಿಳಿಸಿದ್ದಾರೆ. ನೀರಿನ ಸಮಸ್ಯೆ ಸಾಕಷ್ಟಿದೆ
ಸಜೀಪಮುನ್ನೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಸಾಕಷ್ಟಿದ್ದು, ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಪ್ರಸ್ತುತ 17 ಪಂಪುಗಳ ಮೂಲಕ ನೀರು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಹೀಗಾಗಿ ಇಲ್ಲಿನ ಗ್ರಾ.ಪಂ.ಆಡಳಿತ ಮಂಡಳಿ ಯೋಜನೆಯಲ್ಲಿ ಸಜೀಪಮುನ್ನೂರನ್ನು ಸೇರಿಸಿ ಗ್ರಾಮದ ನೀರಿನ ಸಮಸ್ಯೆ ಹೋಗಲಾಡಿಸುವಂತೆ ಪಕ್ಷಾತೀತವಾಗಿ ಒತ್ತಡ ಹಾಕುತ್ತಿದೆ.
- ಪ್ರಕಾಶ್, ಅಭಿವೃದ್ಧಿ ಅಧಿಕಾರಿ, ಸಜಿಪಮುನ್ನೂರು ಗ್ರಾ.ಪಂ. ಪ್ರತ್ಯೇಕ ಬೇಡಿಕೆ
ಹಿಂದೆ ಬಹುಗ್ರಾಮ ಯೋಜನೆಯಲ್ಲಿ ನೀರು ಕೊಟ್ಟಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ವಿವಿಧ ಬೇಡಿಕೆಗಳನ್ನಿಟ್ಟಿದ್ದಾರೆ. ಮೊದಲ ಹಂತದಲ್ಲೇ ಪೈಪ್‌ಲೈನ್, ಪ್ರತ್ಯೇಕ ಶುದ್ಧೀಕರಣ ಘಟಕಕ್ಕೆ ಬೇಡಿಕೆ ಇದ್ದು, ಆದರೆ ಅದರ ಅನುಷ್ಠಾನ ಕಷ್ಟಸಾಧ್ಯ. ಹೀಗಾಗಿ ಮುಂದೆ ಏನು ಎಂಬುದನ್ನು ತೀರ್ಮಾನಿಸಬೇಕಿದೆ.
-ಶೋಭಾಲಕ್ಷ್ಮೀ ಸಹಾಯಕ ಎಂಜಿನಿಯರ್, ಕೆಯುಡಬ್ಲ್ಯೂ ಎಸ್‌ಡಿಬಿ ಮಂಗಳೂರು ಅನುಕೂಲವಿಲ್ಲ
ಸಜೀಪಮುನ್ನೂರು ಗ್ರಾಮದಲ್ಲೇ ನೀರಿಗಾಗಿ ಸಾಕಷ್ಟು ತೊಂದರೆಯಿದ್ದು, ಇಲ್ಲಿಂದ ಎಲ್ಲರೂ ನೀರು ಕೊಂಡುಹೋಗುತ್ತಾರೆಯೇ ಹೊರತು ನಮ್ಮ ಗ್ರಾಮಕ್ಕೆ ಅನುಕೂಲವಾಗುವ ರೀತಿಯ ನೀರಿನ ಯೋಜನೆ ಮಾಡಿಲ್ಲ. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ. ನೂತನವಾಗಿ ಜಾಕ್‌ವೆಲ್ ಮಾಡುವುದಾದರೆ ಸಜೀಪಮುನ್ನೂರಿಗೆ ನೀರು ಕೊಡುವ ಹಾಗೇ ಶುದ್ಧಿಕರಣ ಘಟಕ ಮಾಡಬೇಕು. ನೀರು ಹೋಗುವ ಪೈಪ್‌ಲೈನ್ ಮಾಡುವಾಗಲೇ ಹಿಂದಕ್ಕೆ ಬರುವ ಪೈಪ್‌ಲೈನ್ ಕೂಡ ಹಾಕಬೇಕು ಎಂಬುದು ನಮ್ಮ ಆಗ್ರಹ.
-ಶರೀಫ್ ನಂದಾವರ,
ಅಧ್ಯಕ್ಷರು, ಸಜಿಪಮುನ್ನೂರು ಗ್ರಾ.ಪಂ. -ಕಿರಣ್ ಸರಪಾಡಿ