ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ 50ರ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
Advertisement
ಬೇರೆ ರಾಜ್ಯಗಳು ಮತ್ತು ಕೇಂದ್ರದೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್ ಬಳಕೆ ಮಾಡಲಿ. ಆದರೆ, ರಾಜ್ಯಮಟ್ಟದಲ್ಲೂ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯಲಾಗುತ್ತದೆ. ಭಾಷೆಯ ಬಗ್ಗೆ ಈ ಉದಾಸೀನ ಅಥವಾ ಕೀಳರಿಮೆ ಹೋಗಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವ ವಾತಾವರಣ, ಕನ್ನಡದ ಅನಿವಾರ್ಯತೆ ಸೃಷ್ಟಿಸುವ ಅಗತ್ಯವಿದೆ ಎಂದು ಹೇಳಿದರು.ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶದಲ್ಲಿ ಅಲ್ಲಿನ ಭಾಷೆ ಕಲಿಯುವ ಅನಿವಾರ್ಯತೆ ಸೃಷ್ಟಿಸಲಾಗಿದೆ. ಆದರೆ, ನಮ್ಮಲ್ಲಿ ಹಾಗಿಲ್ಲ. ನಾವೇ ಅವರ ಭಾಷೆ ಕಲಿಯುತ್ತೇವೆ ಅಥವಾ ಇಂಗ್ಲಿಷ್‌ನಲ್ಲಿ ವ್ಯವಹರಿಸಲು ಯತ್ನಿಸುತ್ತೇವೆ. ಹಾಗಂತ, ಕನ್ನಡಿಗರು ಅಭಿಮಾನ ಶೂನ್ಯರು ಅಂತಲ್ಲ; ನಮ್ಮ ಔದಾರ್ಯತೆ ತುಸು ಜಾಸ್ತಿಯೇ ಆಯ್ತು ಅನಿಸುತ್ತಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಸರಕಾರದ ವಿವಿಧ ಇಲಾಖೆಗಳ ಪ್ರತಿಯೊಂದು ಲೆಟರ್‌ಹೆಡ್‌ನಲ್ಲಿ ಕರ್ನಾಟಕ ಸಂಭ್ರಮ 50ರ ಲಾಂಛನ ಪ್ರಕಟಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಾಳಿಪಟ ಉತ್ಸವ, ಹಂಪಿಯಿಂದ ಗದಗ ವೀರನಾರಾಯಣ ದೇವಸ್ಥಾನದವರೆಗೆ ರಥಯಾತ್ರೆ, ಐಟಿ-ಬಿಟಿ ಕಚೇರಿಗಳಲ್ಲಿ ರಾಜ್ಯೋತ್ಸವ, ಸುಪ್ರಭಾತದ ಮೊದಲು ನಾಡಗೀತೆ ಮೊಳಗಬೇಕು ಎನ್ನುವುದು ಸೇರಿದಂತೆ ಇಡೀ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ಲಾಂಛನದ ವಿನ್ಯಾಸ 1 ಲ.ರೂ. ಬಹುಮಾನ
ಕರ್ನಾಟಕ ಸಂಭ್ರಮ- 50 ಲಾಂಛನ ರಚಿಸಿದ ರವಿರಾಜ ಹುಲಗೂರ ಅವರಿಗೆ ಒಂದು ಲಕ್ಷ ರೂ. ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸಂಭ್ರಮ-50 ಲಾಂಛನಕ್ಕೆ ಆಸಕ್ತರಿಂದ ಮಾದರಿಗಳನ್ನು ಆಹ್ವಾನಿಸಲಾಗಿತ್ತು. 271 ಮಾದರಿಗಳು ಬಂದಿದ್ದವು. ಈ ಪೈಕಿ ರವಿರಾಜ ಹುಲಗೂರ ಅವರ ಮಾದರಿ ಆಯ್ಕೆಯಾಗಿದ್ದು, ಇಲಾಖೆಯಿಂದ 25 ಸಾವಿರ ರೂ. ಚೆಕ್ ಅನ್ನು ಬಹುಮಾನವಾಗಿ ನೀಡಲಾಯಿತು. ಇದರ ಜತೆಗೆ ಬಿಬಿಎಂಪಿಯಿಂದ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದರು.