Advertisement

ಭ್ರಷ್ಟಾಚಾರ ರಹಿತ, ಸ್ವಚ್ಛ, ಪಾರದರ್ಶಕ ಆಡಳಿತ ಸಚಿವದ್ವಯರ ಭರವಸೆ

07:20 PM May 30, 2023 | Team Udayavani |

ಕಲಬುರಗಿ: ಭ್ರಷ್ಟಾಚಾರ ರಹಿತ, ಸ್ಚಚ್ಛ ಹಾಗೂ ಅಭಿವೃದ್ದಿ ಪರ ಆಡಳಿತ ನೀಡುವ ಮೂಲಕ ರಾಜ್ಯದ ಜಿಲ್ಲೆಯ ಜನರು ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

Advertisement

ಸಚಿವರಾದ ನಂತರ ಮೊದಲ ಬಾರಿ ನಗರಕ್ಕೆ ಆಗಮಿಸಿದ ಸಚಿವದ್ವಯರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ರಾಜ್ಯದ ಹಾಗೂ ಜಿಲ್ಲೆಯ ಜನರು ನಮ್ಮ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡು ಮತದಾನ ಮಾಡುವ ಮೂಲಕ ಅಭೂತಪೂರ್ವ ಗೆಲುವು ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಮೂಲಕ ದಕ್ಷ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ನೀಡಿದ ಐದು ಗ್ಯಾರೆಂಟಿಗಳನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ಅವರಿಗೆ ನೀಡಿದ ಮಾತನನ್ನು ಉಳಿಸಿಕೊಂಡು ನಂತರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅವರು ಹೇಳಿದರು.

ನೆಟೆ ನಷ್ಟ ಕುರಿತು ಚರ್ಚೆ
ತೊಗರಿಗೆ ಅಂಟಿದ್ದ ನೆಟೆರೋಗದ ಹಿನ್ನೆಲೆಯಲ್ಲಿ ಅಪಾರ ನಷ್ಠವಾಗಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಈ‌ ಕುರಿತಂತೆ ಮುಂದಿನ ಸಚಿವ ಸಂಪುಟದಲ್ಲಿ ಸಮಗ್ರ ಚರ್ಚೆ ನಡೆಸಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಗಂಗಾಕಲ್ಯಾಣ ಯೋಜನೆಯಲ್ಲಿ ನಡೆದ ಅವ್ಯವಹಾರ ಕುರಿತು ಈಗಾಗಲೇ ವಿಧಾನಸಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

ಕೆಪಿಟಿಸಿಎಲ್ ಸೇರಿದಂತೆ ಈ ಹಿಂದಿನ ಸರ್ಕಾರ ನಡೆಸಿದ್ದ ನೇಮಕಾತಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಇದ್ದ ಅಡೆತಡೆಗಳನ್ನು ನಿವಾರಣೆ ಮಾಡಲಾಗಿದ್ದು ನಿಯಮಾವಳಿಗಳ ಅನ್ವಯ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿದ್ದ ಅನುದಾನ ನೀಡದೇ ಇರುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ. ಆದರೆ ನಮ್ಮ ಸರ್ಕಾರ ಸರಳೀಕರಣ ಹಾಗೂ ಸಬಲೀಕರಣದ ಮೂಲಕ ಯೋಜನೆಗಳನ್ನು ರೂಪಿಸಿ ಕಂದಾಯ ಸಂಗ್ರಹಣೆ ಮಾಡಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವುದಾಗಿ ಖರ್ಗೆ ವಾಗ್ಧಾನ ನೀಡಿದರು.

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಕುರಿತಂತೆ ನಗರ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು‌ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಈ ಸಭೆಯಲ್ಲಿ ನೀರಿನ ಸಮಸ್ಯೆಯ ಕುರಿತು ವಿವರವಾದ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಆರೋಗ್ಯ ಸುಧಾರಣೆಗೆ ದಿಟ್ಟ ಹೆಜ್ಜೆ
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಕಲಬುರ್ಗಿ ಜಿಲ್ಲೆಗೆ ಈಗಾಗಲೇ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗಿದ್ದು ಈಗಿರುವ ಆಸ್ಪತ್ರೆಯ ಪಕ್ಕದಲ್ಲಿ ಲಭ್ಯವಿರುವ ಒಂದು ಎಕರೆ ಜಾಗವನ್ನು ಆಸ್ಪತ್ರೆಗೆ ಬಳಸಿಕೊಳ್ಳುವ ಯೋಚನೆ ಇದೆ ಎಂದರು.

ಜಿಲ್ಲಾ ಕೆಂದ್ರದಲ್ಲಿ ಟ್ರಾಮಾ ಸೆಂಟರ್, ತಾಯಿ ಮಗು ಆಸ್ಪತ್ರೆ ಹಾಗೂ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಯೋಜನೆ ಇದ್ದು ಈ ಬಗ್ಗೆ ಚರ್ಚಿಸಿ ಅತೀ ಶೀಘ್ರದಲ್ಲೇ ಈ ಮೂರು ಆಸ್ಪತ್ರೆ ಗಳನ್ನು ಸ್ಥಾಪಿಸಲಾಗುವುದು ಎಂದು ಪಾಟೀಲ್ ಹೇಳಿದರು.

ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಷಿಜನ್ ಕೊರತೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು ಈ ಕೂಡಲೇ ಹೆಚ್ಚುವರಿ ಆಕ್ಷಿಜನ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಪ್ರತ್ಯೇಕ ಆಕ್ಷಿಜನ್ ಪ್ಲಾಂಟ್ ಕೂಡಾ ಸ್ಥಾಪಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿಗಾಗಿ ಹಿರಿಯ ನಾಯಕ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹತ್ತು ಅಂಶಗಳ ಕಾರ್ಯಕ್ರಮ ರೂಪಿಸಿದ್ದು ಈ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಬಿ.ಆರ್. ಪಾಟೀಲ, ಕನೀಜ್ ಪಾಟೀಲ, ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ ಪಾಟೀಲ, ಶರಣು ಮೋದಿ, ನೀಲಕಂಠ ಮುಲಗೆ ಸೇರಿದಂತೆ ಹಲವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next