Advertisement
ದೇಶದ ಅನೇಕ ರಾಜ್ಯಗಳಲ್ಲಿ ಅದೆಷ್ಟೋ ಹೂಡಿಕೆದಾರರ ಮೇಳಗಳಾಗಿವೆ. ಅನುಷ್ಠಾನ ನೋಡಿದರೆ ಅತ್ಯಲ್ಪವಾಗಿದೆ. ಇದು ನಮಗೆ ಪಾಠವಾಗಬೇಕು. ಉಕ ಕ್ಕೆ ಮುಖ್ಯವಾಗಿ ಉದ್ಯೋಗ ಸೃಷ್ಟಿ ಹಾಗೂ ಉತ್ಪಾದನಾ ವಲಯಕ್ಕೆ ಒಲವು ತೋರಬೇಕಾಗಿದೆ. ಹೂಡಿಕೆದಾರರು ಉಕ ಕಡೆ ಯಾಕೆ ಬರಬೇಕೆಂಬುದನ್ನು ಪರಿಣಾಮಕಾರಿ ಮನವರಿಕೆ ನಮ್ಮ ಮುಂದಿರುವ ಸವಾಲು ಎಂಬುದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ, ಹು-ಧಾ ಅಭಿವೃದ್ಧಿ ವೇದಿಕೆ ಉಪಾಧ್ಯಕ್ಷ ಡಾ| ಅಶೋಕ ಶೆಟ್ಟರ ಅವರ ಅಭಿಪ್ರಾಯ.
Related Articles
Advertisement
ಕೃಷಿ-ತೋಟಗಾರಿಕೆಯ ವೈವಿಧ್ಯಮಯ ಉತ್ಪನ್ನಗಳು, ಖನಿಜ ಸಂಪತ್ತು, ಮಾನವ ಸಂಪನ್ಮೂಲ, ಹುಬ್ಬಳ್ಳಿ-ಧಾರವಾಡ ಆಟೋಮೊಬೈಲ್ ಉದ್ಯಮದಲ್ಲಿ, ಬೆಳಗಾವಿ ಏರೋಸ್ಪೇಸ್ ಉದ್ಯಮದಲ್ಲಿ ಮಹತ್ವದ ಸಾಧನೆ ತೋರಿರುವುದು, ಸಂಪರ್ಕ ಸೌಲಭ್ಯಗಳಿಲ್ಲ ಎಂಬ ಕೊರತೆ ಬಹುತೇಕ ನೀಗಿರುವುದು, ಸ್ನೇಹಮಯ ಮನೋಭಾವ ಉ.ಕರ್ನಾಟಕದ ಸಾಮರ್ಥ್ಯವಾಗಿದೆ. ನಮ್ಮಲ್ಲಿನ ಕೀಳರಿಮೆ ಸಾಕಷ್ಟು ಹೊಡೆತ ಕೊಟ್ಟಿದೆ ಎಂಬುದನ್ನು ನಾನು ಮುಕ್ತ ಮನಸ್ಸಿನಿಂದ ಒಪ್ಪುತ್ತೇನೆ. ಆಶಾದಾಯಕ ಬೆಳವಣಿಗೆ ಎಂದರೆ, ನಾವೀಗ ಕೀಳರಿಮೆಯಿಂದ ಹೊರಬರುತ್ತಿದ್ದೇವೆ. ನಮ್ಮ ವಿಶ್ವಾಸ ಮಟ್ಟ ಹೆಚ್ಚುತ್ತಿದೆ. ಆಡಳಿತಾತ್ಮಕ ಇನ್ನಿತರ ದೃಷ್ಟಿಯಿಂದ ಬೆಂಗಳೂರು ಅತಿಯಾದ ಅವಲಂಬನೆ ಈಗಲೂ ನಮ್ಮನ್ನು ಕಾಡುವಂತಾಗಿದೆ.
ದೃಢ ನಿರ್ಧಾರದ ಹೆಜ್ಜೆ ಅವಶ್ಯ: ಉದ್ಯಮ ಬೆಳವಣಿಗೆ ಎಂದರೆ ಅದು ಕೇವಲ ಒಂದೆರಡು ನಗರಗಳಿಗೆ ಕೇಂದ್ರಿಕೃತವಾಗಿರಬಾರದು. ಅದು ಬೆಳವಣಿಗೆ ವಿಕೇಂದ್ರೀಕರಣಗೊಳ್ಳಬೇಕು, ಸುಸ್ಥಿರತೆ, ಪ್ರಾದೇಶಿಕ ಸಮತೋಲನಕ್ಕೆ ಪೂರಕವಾಗಿರಬೇಕು. ಇದು ರಾಜ್ಯದ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ಇನ್ನಿತರರಾಜ್ಯಗಳನ್ನೇ ತೆಗೆದುಕೊಳ್ಳಿ, ಅಲ್ಲಿನ ರಾಜ್ಯಗಳ ರಾಜಧಾನಿಯಷ್ಟೇ ಅಲ್ಲ. ಅನೇಕ ನಗರಗಳು ಉದ್ಯಮ-ಅಭಿವೃದ್ಧಿ ದೃಷ್ಟಿಯಿಂದ ಬೆಳೆದಿವೆ. ನಮ್ಮಲ್ಲಿ ಬೆಂಗಳೂರು ಕೇಂದ್ರಿಕೃತ ಉದ್ಯಮ ಬೆಳವಣಿಗೆ ಆಗುತ್ತಿದ್ದು, ಮುಂದೆಯೂ ಇದೇ ಸ್ಥಿತಿ ಇರಬೇಕಾ? ಬೆಂಗಳೂರು ಹೊರತಾದ ಬೆಳವಣಿಗೆ ನಿಟ್ಟಿನಲ್ಲಿ ಸರಕಾರ ದೃಢ ನಿರ್ಧಾರ, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.
ದೇಶದ ಅನೇಕ ರಾಜ್ಯಗಳು ಹೂಡಿಕೆದಾರ ಮೇಳ ಮಾಡುತ್ತಿವೆ. ಪೈಪೋಟಿ ರೂಪದ ಆಕರ್ಷಕ ಕೊಡುಗೆ-ರಿಯಾಯ್ತಿ ಘೋಷಿಸುತ್ತಿವೆ. ನಮ್ಮಲ್ಲಿಯೇ ಯಾಕೆ ಉದ್ಯಮಿಗಳು ಬರಬೇಕು ಎಂಬುದ ಸ್ಪಷ್ಟ ನಿಲುವು, ಉತ್ತರ ಕರ್ನಾಟಕದ ಸಂಪನ್ಮೂಲ, ಇಲ್ಲಿನಉದ್ಯಮಸ್ನೇಹಿ ವಾತಾವರಣವನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕಾಗಿದೆ. ಹೂಡಿಕೆದಾರರ ಮೇಳದಲ್ಲಿ ಉದ್ಯಮದಾರರು ಹಾಗೂ ರಾಜ್ಯ ಸರಕಾರ ಒಡಂಬಡಿಕೆಗೆ ಸಹಿ ಹಾಕಿದರೆ ಅಲ್ಲಿಗೆ ಮುಗಿಯಲಿಲ್ಲ. ಒಬ್ಬ ಉದ್ಯಮಿ ಬಯಸುವುದು ಸರಳ ಹಾಗೂ ತ್ವರಿತ ರೀತಿಯ ಅನುಷ್ಠಾನ ಕ್ರಮಗಳನ್ನು. ಉದ್ಯಮಕ್ಕೆ ಭೂಮಿ ಪಡೆಯುವುವಿಕೆ, ವಿವಿಧ ರೀತಿಯ 20-30 ಪರವಾನಿಗೆಗೆ ಇರುವ ಅಡೆ-ತಡೆ, ವಿಳಂಬ ಧೋರಣೆ, ಉದ್ಯಮ ಪರವಾನಿಗೆಗೆ ಏಕಗವಾಕ್ಷಿ ವ್ಯವಸ್ಥೆ ಎಂದು ಸರಕಾರ ಹೇಳುತ್ತಿದ್ದರೂ, ನೈಜ ಸ್ವರೂಪದ ಏಕಗವಾಕ್ಷಿ ವ್ಯವಸ್ಥೆ ಇದೆಯೇ? ಉದ್ಯಮಿಗಳು ಬಯಸುವ ಸರಳ ಹಾಗೂ ತ್ವರಿತ ಕ್ರಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬ ಆತ್ಮಾವಲೋಕನ ಅವಶ್ಯವಾಗಿದೆ.
-ಅಮರೇಗೌಡ ಗೋನವಾರ