ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬರೀ ಅಭಿವೃದ್ಧಿ ಮಂತ್ರ. ಎಲ್ಲೆಂದರಲ್ಲಿ ನಿತ್ಯ ಒಂದಿಲ್ಲೊಂದು ಕಾಮಗಾರಿ ಗಳು ಪ್ರಗತಿಯಲ್ಲಿ ಇರುತ್ತವೆ. ಆದರೆ, ಬನಶಂಕರಿ – ಸಿಲ್ಕ್ಬೋರ್ಡ್ ಒಳವರ್ತುಲ ರಸ್ತೆಯ ಮಾರೇನಹಳ್ಳಿ ಪಾಲಿಗೆ ಮಾತ್ರ ಮುಂದಿನ ಎರಡು ವರ್ಷ ಗಳಮಟ್ಟಿಗೆ ಅಭಿ ವೃದ್ಧಿ ಎನ್ನುವುದು ಮರೀಚಿಕೆ ಆಗಲಿದೆ!
ಹೌದು, 2021ರ ಅಂತ್ಯದವ ರೆಗೆ ಈ ಎರಡೂವರೆ ಕಿ.ಮೀ. ಉದ್ದದ ಮಾರ್ಗದಲ್ಲಿ ರಸ್ತೆ ಅಗೆ ಯುವಂತಿಲ್ಲ. ಕೇಬಲ್ ಅಳವಡಿ ಸುವಂತಿಲ್ಲ. ಕಂಬಗಳನ್ನು ಹಾಕುವಂತಿಲ್ಲ. ಪಾದಚಾರಿ ರಸ್ತೆ ನಿರ್ಮಾಣ ಮಾಡುವಂತಿಲ್ಲ. ಇದಕ್ಕೆ ಕಾರಣ ಕೂಡ ಮತ್ತೂಂದು ಅಭಿವೃದ್ಧಿ ಕಾಮಗಾರಿ. ಅದು- “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆ. ಆದರೆ, ಕಾಮಗಾರಿ ಪ್ರಗತಿ ಹಾಗೂ ಸಂಚಾರ ದಟ್ಟಣೆ ನಿರ್ವಹಣೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇಂತಹದ್ದೊಂದು ಕ್ರಮ ಅಗತ್ಯ ಮತ್ತು ಅನಿ ವಾರ್ಯ ಎಂದು ಸಂಚಾರ ಪೊಲೀಸರು, ಬಿಎಂಆರ್ ಸಿಎಲ್, ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಉದ್ದೇಶಿತ ರಸ್ತೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಂತೆ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಸೆಂಟ್ರಲ್ ಸಿಲ್ಕ್ಬೋ ರ್ಡ್, ಬಿಟಿಎಂ ಲೇಔಟ್, ಬನಶಂಕರಿ, ಬನ್ನೇರುಘಟ್ಟ ಮುಖ್ಯರಸ್ತೆ ಸೇರಿ ಮತ್ತಿತರ ಕಡೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗುತ್ತಿದೆ. ಹಾಗಾಗಿ, ಖಾಸಗಿ ವಾಹನಗಳ ಸಂಚಾರವನ್ನೂ ಇಲ್ಲಿ ನಿರ್ಬಂಧಿಸಲಾಗುತ್ತದೆ. ದ್ವಿಚಕ್ರ ವಾಹನಗಳು ಮತ್ತು ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಈ ರಸ್ತೆ ಗುಂಡಿಮಯವಾಗಿದ್ದು, ಚರಂಡಿಗಳಲ್ಲಿ ಹೂಳೆತ್ತಿಲ್ಲ. ಸ್ಲಾಬ್ ಅಳವಡಿಸಿಲ್ಲ. ಜಲಮಂಡಳಿ ಕೈಗೆತ್ತಿಕೊಂಡ ಒಳಚರಂಡಿ ಕಾಮಗಾರಿಯಿಂದ ರಸ್ತೆ ಮೇಲೆಯೇ ಮಣ್ಣು ಬಿದ್ದಿದ್ದು, ಕೇಬಲ್‌ಗಳು ಚೆಲ್ಲಾ ಪಿಲ್ಲಿಯಾಗಿವೆ.
ಆದ್ದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ ನೀಡಲಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಬಳಿಯ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಪರ್ಯಾಯ ಪಾದಚಾರಿ ಮಾರ್ಗ ಕಲ್ಪಿಸಿಲ್ಲ. ಸುರಕ್ಷತಾ ಕ್ರಮಕೈಗೊಂಡಿಲ್ಲ. ವಾಹನದಟ್ಟಣೆ ದೃಷ್ಟಿಯಿಂದ ಇಲ್ಲಿನ ಮೇಲ್ಸೇತುವೆಯ ಒಂದು ಬದಿಯನ್ನು ಮಾತ್ರ ಸದ್ಯಕ್ಕೆ ತೆರವುಗೊಳಿಸಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗವಾಗಿ ಹೋಗುವ ಸೇತುವೆಯನ್ನು ಕಾಮಗಾರಿ ಅಂತಿಮ ಹಂತಕ್ಕೆ ಬಂದಾಗ ಒಡೆಯಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ವಾರದಲ್ಲಿ ಪೂರ್ಣ: ಈ ಪ್ರದೇಶದ ಒಳಚರಂಡಿ ಕಾಮಗಾರಿಗಾಗಿ ಬಿಎಂಆರ್‌ಸಿಎಲ್ ಜಲಮಂಡಳಿಗೆ 5 ಕೋಟಿ ರೂ. ನೀಡಿದೆ. ರಾಘವೇಂದ್ರಸ್ವಾಮಿ ಮಠದಿಂದ ಸಂಗಮ ಸರ್ಕಲ್‌ವರೆಗಿನ ಒಂದು ಕಿ.ಮೀ.ಒಳಚರಂಡಿ ಕಾಮಗಾರಿ, ಜೆ.ಡಿ. ಮರ ಕೊಳಚೆ ಪ್ರದೇಶದಿಂದ ಜಯದೇವ ವೃತ್ತದವರೆಗೆ ರಸ್ತೆ ಡಾಂಬರೀಕರಣ, ಪಾದಚಾರಿ ಮಾರ್ಗ, ಒಳಚರಂಡಿ ಕಾಮಗಾರಿ ಆರಂಭಗೊಂಡಿದ್ದು, ವಾರದೊಳಗೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಚ್ಚಿದ ಅಂಗಡಿಗಳು; ವ್ಯಾಪಾರ ಕುಸಿತ: ಮಾರೇನಹಳ್ಳಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಸ್ಟ್ ಎಂಡ್ ವೃತ್ತ, ರಾಘವೇಂದ್ರ ಸ್ವಾಮಿ ಮಠ ಸೇರಿ ಕೆಲವಡೆ ಮೆಟ್ರೋ ಪಿಲ್ಲರ್ ಗಳನ್ನು ನಿರ್ಮಿಸಲಾಗಿದೆ. ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಈ ರಸ್ತೆಯಲ್ಲಿ ವ್ಯಾಪಾರ ಮಳಿಗೆಗಳು ಹೆಚ್ಚಾಗಿದ್ದು, ವಾಹನಗಳ ಓಡಾಟ ನಿಷೇಧಿಸಲಾಗಿದೆ. ಆದ್ದರಿಂದ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಈವರಗೆ 24ಕ್ಕೂ ಅಧಿಕ ಅಂಗಡಿಗಳು ಮುಚ್ಚಿವೆ. ಕಾಮಗಾರಿ ವಿಳಂಬದಿಂದವ್ಯಾಪಾರ ಕುಸಿದಿದೆ ಎಂದು ಸ್ಥಳೀಯ ವ್ಯಾಪಾರಸ್ಥ ರಾಜು ಅವಲತ್ತುಕೊಂಡರು.
ಮೆಟ್ರೋ ಕಾಮಗಾರಿ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಶೀಘ್ರ ಮುಕ್ತಾಯಗೊಳಿಸಬೇಕು. ಎರಡು ವರ್ಷ ಅಭಿವೃದ್ಧಿ ಕಾಮಗಾರಿ ಮಾಡುವುದಿಲ್ಲವೆಂದರೆ, ಮಾರೇನಹಳ್ಳಿ ಪ್ರದೇಶ ಹಿಂದುಳಿಯುತ್ತದೆ. ಸುತ್ತಲಿನ ಜನ ಕಾಮಗಾರಿಯಿಂದ ಕಿರಿಕಿರಿ ಅನುಭವಿಸುತ್ತಾರೆ. ವಾಹನ ದಟ್ಟಣೆಯೂ ಹೆಚ್ಚಾಗುತ್ತದೆ. ಈ ಪ್ರದೇಶದಲ್ಲಿ ಆಸ್ಪತ್ರೆಗಳಿದ್ದು, ರೋಗಿಗಳಿಗೂತೊಂದರೆಯಾಗಲಿದೆ.
-ಚಿತ್ತಯ್ಯ, ಆಟೋ ಚಾಲಕ
-ಮಂಜುನಾಥ ಗಂಗಾವತಿ