ಔರಾದ: ಸಾರ್ವಜನಿಕರ ಸಮಸ್ಯೆ ಬಗೆಹರಿಸಲು, ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪೊಲೀಸ್
ಸಿಬ್ಬಂದಿ ಕುಟುಂಬ ಸದಸ್ಯರು ವಾಸಿಸುವ ವಸತಿ ನಿಲಯದ ಸುತ್ತಲೂ ಅಸ್ವತ್ಛತೆ ವಾತಾವರಣ ನಿರ್ಮಾಣವಾಗಿ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿದೆ.
ಸರ್ಕಾರ ಪಟ್ಟಣದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಮಾಡಿದೆ. ಆದರೆ ಕಟ್ಟಡಕ್ಕೆ ಸುತ್ತು ಗೋಡೆ ನಿರ್ಮಿಸಿಲ್ಲ. ಕುಡಿಯುವ ನೀರು ಪೂರೈಕೆ ಹಾಗೂ ಸ್ವತ್ಛತೆ ಕೆಲಸಗಳು ನಡೆಯದೇ ಇಲ್ಲಿನ ನಿವಾಸಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಪರಿಸರದಲ್ಲಿ ದುರ್ನಾತ: ಪೊಲೀಸ್ ವಸತಿ ನಿಲಯದ ಶೌಚಾಲಯ ಟ್ಯಾಂಕ್ ಒಡೆದು ಮಲಿನ ನೀರು ಕಟ್ಟಡವನ್ನು ಸುತ್ತುವರಿದಿದೆ. ಇದರಿಂದ ಪೊಲೀಸ್ ಕುಟುಂಬ ಸದಸ್ಯರು ಹಾಗೂ ಪಕ್ಕದಲ್ಲಿರುವ ಬಸವನ ಗಲ್ಲಿ, ಬಾಲ ಭಾರತಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತುಂಬ ಕಿರಿಕಿರಿಯಾಗುತ್ತಿದೆ. ಆದರೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಪಪಂ ಅಧಿಕಾರಿಗಳು ಸ್ವತ್ಛತೆ ಕೆಲಸ ಮಾಡಲು ಮುಂದಾಗಿಲ್ಲ.
ಪೊಲೀಸರ ಮನವಿಗಿಲ್ಲ ಬೆಲೆ: ವಸತಿ ನಿಲಯ ಸುತ್ತಮುತ್ತ ಮಲಿನ ನೀರು ನಿಲ್ಲುತ್ತಿದೆ. ಅಲ್ಲದೆ ಶೌಚಾಲಯದ ಟ್ಯಾಂಕ್ ಒಡೆದು ದುರ್ನಾತ ಹರಡಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ದಾರಿ ಹೋಕರಿಗೂ ಈ ವಾಸನೆ ಕಿರಿಕಿರಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನರಿದ್ದಾರೆ. ಈ ಬಗ್ಗೆ ಶೀಘ್ರ ಸ್ವತ್ಛತಾ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಸತಿ ನಿಲಯದ ಸಿಬ್ಬಂದಿ ತಿಳಿಸಿದ್ದಾರೆ.
ಪೊಲೀಸ್ ವಸತಿ ನಿಲಯಕ್ಕೆ ಸುತ್ತು ಗೋಡೆ ಇಲ್ಲದ್ದರಿಂದ ಹಂದಿಗಳು, ಜಾನುವಾರುಗಳು ಕಟ್ಟಡದ ಸುತ್ತಮುತ್ತ ದಾಂಗುಡಿ ಇಡುತ್ತಿವೆ. ಇದರಿಂದ ವಸತಿ ನಿಲಯದ ಮಕ್ಕಳು ಹೊರ ಹೋಗಲು ಭಯದ ವಾತಾವರಣವಿದೆ ಎನ್ನುತ್ತಾರೆ ನಿವಾಸಿಗಳು.
ಸ್ವತ್ಛತೆಗೆ ಮುಂದಾಗಿ: ಪಟ್ಟಣದಲ್ಲಿ ಸ್ವತ್ಛತೆ ಕಾಪಾಡುವುದೇ ನಮ್ಮ ಗುರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ
ಮಾಡಿಕೊಂಡು ಭೇಷ್ ಎನಿಸಿಕೊಂಡ ಪಪಂ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಪ್ರಾಯೋಗಿಕವಾಗಿ ಕೆಲಸ ಮಾಡಿ ಜನರ ಹಿತ ಕಾಪಾಡಬೇಕು. ಇಲ್ಲವಾದಲ್ಲಿ ರಸ್ತೆಗಿಳಿದು ಉಗ್ರ ಪ್ರತಿಭಟನೆ ಮಾಡುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ.
ರವೀಂದ್ರ ಮುಕ್ತೇದಾರ್