ನ್ಯೂಯಾರ್ಕ್: “ಪಾಕಿಸ್ತಾನದ ನಾಯಕರು ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ನನ್ನ ದೇಶದ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಪ್ರಚಾರ ಮಾಡಲು ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಭಯೋತ್ಪಾದಕರು ಉಚಿತ ಪಾಸ್ ನೊಂದಿಗೆ ಓಡಾಡಿಕೊಂಡಿರುವ ದೇಶವನ್ನು ದುಃಖಕರ ಸ್ಥಿತಿಯಂತೆ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುವುದು ಕೂಡ ಇದೇ ಮೊದಲೇನಲ್ಲ” ಇದು ವಿಶ್ವ ಸಂಸ್ಥೆಯ 76ನೇ ಸಭೆಯಲ್ಲಿ (ಯುಎನ್‌ಜಿಎ) ಭಾರತದ ಪ್ರತಿನಿಧಿ ಸ್ನೇಹಾ ದುಬೆ ಅವರ ಮಾತುಗಳು.
ಯುಎನ್‌ಜಿಎ ಸಭೆಯಲ್ಲಿ ನೆರೆ ರಾಷ್ಟ್ರ ಪಾಕಿಸ್ಥಾನಕ್ಕೆ ಭಾರತ ಖಡಕ್ ಸಂದೇಶ ರವಾನಿಸಿದೆ.
ಈ ಮೊದಲು ವರ್ಚುಯಲ್ ಆಗಿ ಭಾಷಣ ಮಾಡಿದ್ದ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಕುರಿತಂತೆ ಭಾರತ ಸರ್ಕಾರವನ್ನೂ ಟೀಕಿಸಿದ್ದರು.
ಇದನ್ನೂ ಓದಿ:ನ್ಯೂಯಾರ್ಕ್ ತಲುಪಿದ ಮೋದಿ : ಇಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಭಾಷಣ
ಇದಕ್ಕೆ ತಕ್ಕ ಉತ್ತರ ನೀಡಿರುವ ಭಾರತೀಯ ಪ್ರತಿನಿಧಿ ಸ್ನೇಹಾ, ಉಗ್ರರನ್ನು ಬಹಿರಂಗವಾಗಿ ಬೆಂಬಲಿಸುವುದು, ತರಬೇತಿ ನೀಡುವುದು, ಹಣಕಾಸು ಸಹಾಯ ಮಾಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವ ವಿಷಯದಲ್ಲಿ ಪಾಕಿಸ್ತಾನವು ಜಾಗತಿಕವಾಗಿ ಗುರುತಿಸಲಾದ ದೇಶ ಎನ್ನುವುದು ಎಲ್ಲಾ ಸದಸ್ಯ ದೇಶಗಳಿಗೆ ತಿಳಿದಿದೆ. ಆದರೂ ನನ್ನ ದೇಶದ ವಿರುದ್ಧ ದುರುದ್ದೇಶಪೂರಿತ ಪ್ರಚಾರವನ್ನು ಮಾಡುತ್ತಲೇ ಇದ್ದಾರೆ ಎಂದು ಆರೋಪಿಸಿದರು.
‘ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಪ್ರದೇಶಗಳನ್ನು ಇದು ಒಳಗೊಂಡಿದೆ. ಪಾಕಿಸ್ತಾನ ತಾನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳಿಂದ ತಕ್ಷಣವೇ ಹಿಂದೆ ಹೋಗಬೇಕು ಎಂದು ಸ್ನೇಹಾ ದೃಢವಾದ ಸಂದೇಶ ರವಾನಿಸಿದರು.