Advertisement

ಯುಪಿ ಮಾದರಿ ಅನುಕರಣೆ ಎನ್ನುವುದು ಹೊಣೆಗೇಡಿತನದ ಪರಮಾವಧಿ: ಕುಮಾರಸ್ವಾಮಿ ಟೀಕೆ

04:21 PM Jul 29, 2022 | Team Udayavani |

ಬೆಂಗಳೂರು: ರಾಜಧರ್ಮ ಪಾಲಿಸಿ ಎಂದು ಹಿಂದೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ರಾಜಧರ್ಮ ಪಾಲಿಸುವುದಿರಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಧರ್ಮವೇ ಹೇಳಿದ ʼಸರ್ವೇ ಜನೋ ಸುಖಿನೋ ಭವಂತುʼ ಎನ್ನುವ ತತ್ತ್ವವನ್ನೂ ಪಾಲಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೊಮ್ಮಾಯಿ ಅವರು ಇಡೀ ಕರ್ನಾಟಕದ ಮುಖ್ಯಮಂತ್ರಿ. ಕೇವಲ ಬಿಜೆಪಿಗಷ್ಟೇ ಅಲ್ಲ. ನಿನ್ನೆಯ ದಿನ ಅವರು ಮಸೂದ್ ಮತ್ತು ಪ್ರವೀಣ್ ನಿಟ್ಟಾರು ಹತ್ಯೆಯಾದ ಬೆಳ್ಳಾರೆ ಗ್ರಾಮಕ್ಕೆ ಭೇಟಿ ನೀಡಿದಾಗ ಸಂವಿಧಾನದತ್ತವಾಗಿ ಸ್ವೀಕರಿಸಿದ ಪ್ರಮಾಣ ವಚನದ ಪಾವಿತ್ರ್ಯತೆಗೆ ಚ್ಯುತಿ ತಂದಿದ್ದಾರೆ. ಕೊಲೆಗೆ ಕೊಲೆಯೇ ಉತ್ತರವಲ್ಲ. ಪ್ರತೀಕಾರಕ್ಕೆ ಪ್ರತೀಕಾರ ಪ್ರತ್ಯುತ್ತರವಲ್ಲ. ಮುಖ್ಯಮಂತ್ರಿ ನಡೆ ಹಿಂಸೆಯನ್ನು ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು. ಹಾಗೆ ಮಾಡಲಿಲ್ಲ ಎಂದಿದ್ದಾರೆ.

ರಕ್ತದಲ್ಲಿ ಜಾತಿ-ಧರ್ಮಗಳ ಗುಂಪುಗಳಿವೆಯಾ? ಅಷ್ಟು ಸರಳ ವಿಷಯ ಮುಖ್ಯಮಂತ್ರಿಗೆ ಗೊತ್ತಿಲ್ಲದಿದ್ದರೆ ಹೇಗೆ? ಅವರು ಇದ್ದಾಗಲೇ ಮಂಗಳೂರಿನಲ್ಲಿ ಇನ್ನೊಂದು ಕೊಲೆ ನಡೆಯಿತು ಎಂದರೆ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?  ವೈಫಲ್ಯ ಮುಚ್ಚಿಕೊಳ್ಳಲು ಬೊಮ್ಮಾಯಿ ಈಗ ʼಬುಲ್ಡೋಜರ್ʼ ಜಪ ಮಾಡುತ್ತಿದ್ದಾರೆ. ʼಯೋಗಿ ಅದಿತ್ಯನಾಥ್ ಮಾದರಿʼ ಎನ್ನುತ್ತಿದ್ದಾರೆ. ಉತ್ತರ ಪ್ರದೇಶದ ಎನ್ನುವುದು ಕರ್ನಾಟಕಕ್ಕೆ ಮಾತ್ರವಲ್ಲ, ಯಾರಿಗೂ ಮಾದರಿ ಅಲ್ಲ. ಸಹಜ ನ್ಯಾಯ, ಸಂವಿಧಾನಕ್ಕೆ ವಿರುದ್ಧದ ಉತ್ತರಪ್ರದೇಶದ ಆಡಳಿತವನ್ನು ಮಾದರಿ ಅನುಕರಣೆ ಎನ್ನುವುದು ಹೊಣೆಗೇಡಿತನದ ಪರಮಾವಧಿ ಎಂದು ಎಚ್ಡಿಕೆ ಕಟುವಾಗಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:ಎನ್ ಐಎಗೆ ಕೊಟ್ಟ ಪರೇಶ್ ಮೇಸ್ತ,ರುದ್ರೇಶ್ ಪ್ರಕರಣಗಳು ಏನಾಯಿತು? :ರಾಮಲಿಂಗಾ ರೆಡ್ಡಿ

ಸಂವಿಧಾನದ ಮೇಲೆ ಗೌರವ ಇಲ್ಲದವರು ʼಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಾರೆ. ದಕ್ಷತೆ ಇಲ್ಲದವರು ಅಕ್ಕಪಕ್ಕದ ಮಾದರಿಗಳನ್ನು ಹುಡುಕುತ್ತಾರೆ. ಜನತಾ ಪರಿವಾರಿ ಆಗಿದ್ದವರು ಈಗ ಸಂಘ ಪರಿವಾರಿಯಾಗಿ ರೂಪಾಂತರಗೊಂಡು ಉತ್ತರ ಪ್ರದೇಶದ ಮಾದರಿ ಹೆಸರಿನಲ್ಲಿ ರಾಜ್ಯಕ್ಕೆ ʼಹೊಸ ಮಾರಿʼಯನ್ನು ತರಲು ಹೊರಟಿದ್ದಾರೆ. ಇದು ಬೇಕಿಲ್ಲ. ಎಂ.ಎನ್.ರಾಯ್ ಅವರ ಅನುಯಾಯಿ, ಜನತಾ ಪರಿವಾರದ ರಾಯಿಸ್ಟ್ ಎಂದೇ ಖ್ಯಾತರಾಗಿದ್ದ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ಸಂವಿಧಾನ ವಿರೋಧಿಯಾದ ಬುಲ್ಡೋಜರ್ ಮಾದರಿ ಮಾತನಾಡುತ್ತಿರುವುದು ನನಗೆ ಅತೀವ ಆಘಾತ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next