ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ದಿನನಿತ್ಯದ ವ್ಯವಹಾರಗಳಿಗೂ ಕಷ್ಟಪಡುತ್ತಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಶಾಕ್ ನೀಡಿದೆ. ಸಾಲಕ್ಕಾಗಿ ಹೊಸದಾಗಿ ಪಾಕಿಸ್ತಾನ ಸರ್ಕಾರ ನೀಡಿದ್ದ ಪ್ರಸ್ತಾವನೆಯನ್ನು ಐಎಂಎಫ್ ನಿಯೋಗ ತಿರಸ್ಕರಿಸಿದೆ. ಒಂದು ವೇಳೆ ಸಾಲ ಬೇಕು ಎಂದಾದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಬೇಕು, ಸಬ್ಸಿಡಿ ಇಳಿಸಬೇಕು ಎಂಬ ಷರತ್ತು ಇಟ್ಟಿದೆ.
ಆರ್ಥಿಕ ಸಂಕಷ್ಟಕ್ಕೀಡಾಗಿರುವ ಪಾಕಿಸ್ತಾನ, ವಿತ್ತೀಯ ನೆರವು ನೀಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂದೆ ಮಂಡಿಯೂರಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವಿತ ಸಾಲ ನಿರ್ವಹಣಾ ಸೂಚನೆ(ಸಿಡಿಎಂಪಿ)ಯನ್ನು ಐಎಂಎಫ್ಗೆ ಸಲ್ಲಿಕೆ ಮಾಡಿದೆ. ಆದರೆ, ಇದನ್ನು ಪಾಕಿಸ್ತಾನ ಪ್ರವಾಸದಲ್ಲಿರುವ ಐಎಂಎಫ್ ನಿಯೋಗ ತಿರಸ್ಕಾರ ಮಾಡಿದೆ. ಅಲ್ಲದೆ, ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಬೇಕಾದರೆ, ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 11ರಿಂದ 12.50 ಪಾಕ್ ರೂ. ಏರಿಕೆ ಮಾಡಬೇಕು, ವಿದ್ಯುತ್‌ಗೆ ನೀಡುತ್ತಿರುವ ಸಬ್ಸಿಡಿಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಬೇಕು ಎಂದು ಸೂಚಿಸಿದೆ. ಹಾಗೆಯೇ, ಪಾಕಿಸ್ತಾನದ ಸಿಡಿಎಂಪಿ ವಾಸ್ತವಕ್ಕೆ ಅತ್ಯಂತ ದೂರದಲ್ಲಿದೆ ಎಂದೂ ಹೇಳಿದೆ. 2019ರಿಂದಲೂ ಪಾಕಿಸ್ತಾನ ಸರ್ಕಾರಗಳು ಐಎಂಎಫ್ನಿಂದ ಹಣಕಾಸಿನ ನೆರವಿಗಾಗಿ ಕೈಚಾಚುತ್ತಿದ್ದು, ಇದುವರೆಗೆ ಒಂದಿಲ್ಲೊಂದು ಕಾರಣದಿಂದಾಗಿ ತಿರಸ್ಕಾರವಾಗುತ್ತಲೇ ಇದೆ.
ಬೆಂಕಿಯಲ್ಲಿ ಬಿದ್ದ ಪಾಕ್ :
ಸದ್ಯ ಪಾಕಿಸ್ತಾನದಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿದೆ. ಅಲ್ಲದೆ, ಈಗ ಪಾಕ್‌ನಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ 25 ಪಾಕ್ ರೂ. ನೀಡಲಾಗುತ್ತಿದೆ. ಒಂದು ವೇಳೆ 11ರಿಂದ 12.50 ರೂ. ಏರಿಕೆ ಮಾಡಿದರೆ, ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಲಿದೆ. ಹಾಗೆಯೇ, ಹಾಲಿ ಹಣಕಾಸು ವರ್ಷದಲ್ಲಿ ನೀಡಲಾಗುತ್ತಿರುವ ವಿದ್ಯುತ್ ಸಬ್ಸಿಡಿಯನ್ನು 333 ಶತಕೋಟಿ ಪಾಕಿಸ್ತಾನ ರೂಪಾಯಿಗೆ ಇಳಿಸಬೇಕು ಎಂದೂ ಸೂಚಿಸಿದೆ. ಜತೆಗೆ, ವಿದ್ಯುತ್ ಕೊರತೆಯಿಂದಾಗಿ ಮಾಲ್‌ಗಳಿಂದ ಹಿಡಿದು, ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ರಾತ್ರಿ 8ಕ್ಕೇ ಮುಗಿಸಲಾಗುತ್ತಿದೆ. ಹೀಗಾಗಿ, ಪಾಕಿಸ್ತಾನ ಮತ್ತೆ ಕತ್ತಲೆಯ ಕೂಪಕ್ಕೆ ಬೀಳುವ ಎಲ್ಲಾ ಸಾಧ್ಯತೆಗಳೂ ಇವೆ.
Related Articles
ಪೇಶಾವರ ಸ್ಫೋಟಕ್ಕೆ ನಾವು ಹೊಣೆಯಲ್ಲ:
ಪೇಶಾವರ ಮಸೀದಿ ಸ್ಫೋಟಕ್ಕೆ ನಾವು ಕಾರಣವಲ್ಲ, ನಿಮ್ಮ ಸಮಸ್ಯೆಗಳಿಗೆ ನಮ್ಮನ್ನು ಹೊಣೆಯಾಗಿಸಬೇಡಿ ಎಂದು ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಪಾಕ್‌ಗೆ ಸೂಚನೆ ನೀಡಿದೆ. ಸೋಮವಾರವಷ್ಟೇ ಮಸೀದಿಯಲ್ಲಿ ಸಂಭವಿಸಿದ್ದ ಸ್ಫೋಟದಿಂದಾಗಿ 100 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ತಾಲಿಬಾನ್ ಉಗ್ರರೇ ಕಾರಣ ಎಂದು ಪಾಕಿಸ್ತಾನ ಹೇಳಿತ್ತು. ಇದಕ್ಕೆ ತಿರುಗೇಟು ನೀಡಿರುವ ತಾಲಿಬಾನ್, ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಬೇಕು. ನಮ್ಮ ಕಡೆ ಬೆರಳು ತೋರಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದೆ.