ಹೊಸದಿಲ್ಲಿ: ಆಗಸ್ಟ್‌ನಲ್ಲಿ ದೇಶವು ವಾಡಿಕೆಗಿಂತ ಶೇ.16 ರಷ್ಟು ಹೆಚ್ಚು ಮಳೆ ಪಡೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ. ಶನಿವಾರ ಮಾತನಾಡಿದ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ “ಆಗಸ್ಟ್‌ನಲ್ಲಿ ದೇಶದಲ್ಲಿ ಸಾಮಾನ್ಯವಾಗಿ ಸುರಿಯುವ 248.1 ಮಿ.ಮೀ. ಬದಲು 287.1 ಮಿ.ಮೀ.ನಷ್ಟು ಮಳೆಯಾಗಿದೆ. ಜೂ.1ರಿಂದ ದೇಶದಲ್ಲಿ 749 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ 701 ಮಿ.ಮೀ. ಮಳೆ ಸುರಿಯುತ್ತದೆ ಎಂದರು. ಮಳೆ ಮಾರುತಗಳು ದಕ್ಷಿಣದೆಡೆಗೆ ಚಲಿಸಿದ್ದ ರಿಂದ ಹಿಮಾಲಯ ಮತ್ತು ಈಶಾನ್ಯದ ಹಲವು ಪ್ರದೇಶ ಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಕೇರಳ, ಮಹಾರಾಷ್ಟ್ರದ ವಿದರ್ಭ ಜತೆಗೆ ಈಶಾನ್ಯ ಭಾರತದಲ್ಲಿ ಕಡಿಮೆ ಮಳೆಯಾಗಿದೆ ಎಂದಿದ್ದಾರೆ.
ಈ ತಿಂಗಳು ದಕ್ಷಿಣದಲ್ಲೂ ಭಾರೀ ಮಳೆ
ಸೆಪ್ಟಂಬರ್‌ನಲ್ಲೂ ದೇಶದ ವಿವಿಧೆಡೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ತಿಂಗಳಲ್ಲಿ 167.9 ಮಿ.ಮೀ. ಮಳೆಯಾಗಲಿದೆ. ದೇಶದ ಬಹು ತೇಕ ಕಡೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣದ ಬಹುತೇಕ ಭಾಗಗಳು, ಉತ್ತರ ಬಿಹಾರ, ಉತ್ತರ ಪ್ರದೇಶದ ಈಶಾನ್ಯ ಭಾಗ ಸೇರಿ ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಮಹಾಪಾತ್ರ ಹೇಳಿದ್ದಾರೆ.