Advertisement

ವಿಪರೀತ ಜನಸಂಖ್ಯೆಯಿಂದ ಅಸಮತೋಲನ ಸೃಷ್ಟಿ

05:42 PM Jul 13, 2022 | Team Udayavani |

ಬೆಳಗಾವಿ: ಜನಸಂಖ್ಯೆ ನಿಯಂತ್ರಣದ ಜೊತೆಗೆ ಇತ್ತೀಚೆಗೆ ಹರಡುತ್ತಿರುವ ಅನೇಕ ಸಾಂಕ್ರಾಮಿಕ ಕಾಯಿಲೆಗಳನ್ನೂ ನಿಯಂತ್ರಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಜನರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಬಿಮ್ಸ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜನಸಂಖ್ಯಾ ಸ್ಫೋಟದ ಕುರಿತು ಉಪನ್ಯಾಸ ನೀಡಿದ ಲಿಂಗರಾಜ ಕಾಲೇಜಿನ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕ ಜಿ.ಎಂ. ಮಠಪತಿ, ವಿಶ್ವದಲ್ಲಿ 2023ರ ವೇಳೆಗೆ ಎಂಟು ಬಿಲಿಯನ್‌ ಗಡಿ ದಾಟಲಿದೆ. ಜನಸಂಖ್ಯೆ ಹೇರಳವಾಗಿ ಬೆಳೆಯುತ್ತಿದೆ, ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಜನಸಂಖ್ಯಾ ಸ್ಫೋಟದ ಅನುಭವವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶ್ವದ ಜನಸಂಖ್ಯೆಯಲ್ಲಿ ಚೀನಾ ಮತ್ತು ಭಾರತದಲ್ಲಿ ಶೇ.40 ರಷ್ಟು ಪ್ರಮಾಣ ದಾಖಲಾಗುತ್ತಿದೆ. ಆದರೆ ಚೀನಾ ದೇಶವು ಜನಸಂಖ್ಯಾ ನಿಯಂತ್ರಣ ಕುರಿತು ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳು ಭಾರತಕ್ಕೂ ಮನದಟ್ಟಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಮ್ಸ್‌ ನಿರ್ದೇಶಕ ಡಾ. ಈರಣ್ಣ ಪಲ್ಲೇದ, ವಿಪರೀತ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಜನಸಂಖ್ಯಾ ಅಸಮತೋಲನ ಸೃಷ್ಟಿಯಾಗಿದೆ. ಹೀಗಾಗಿ ಜನಸಂಖ್ಯಾ ನಿಯಂತ್ರಣದಲ್ಲಿ ಸಾರ್ವಜನಿಕರು ಜಾಗೃತೆ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ, ಪುಟ್ಟ ಕುಟುಂಬದ ಮೂಲಕವೇ ದೇಶದ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸುತ್ತಿರುವ ಯೋಜನೆಗಳ ಕುರಿತು ಸಾರ್ವಜನಿಕರು ಜಾಗೃತರಾಗಬೇಕಿದೆ ಎಂದು ಮನವಿ ಮಾಡಿದರು. ಪ್ರಸಕ್ತ ವರ್ಷದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಅವಿರತ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ತಾಲೂಕಾ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶುಶ್ರೂಷ, ಆರೋಗ್ಯ ಸುರಕ್ಷಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುಧಾಕರ ಆರ್‌.ಸಿ, ವೈದ್ಯಕೀಯ ಅಧೀಕ್ಷಕ ಡಾ.ಅಣ್ಣಾಸಾಹೇಬ ಪಾಟೀಲ ಉಪಸ್ಥಿತರಿದ್ದರು.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ವ್ಹಿ.ಕಿವಡಸಣ್ಣವರ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮಹೇಶ ಕೋಣಿ ಮಾತನಾಡಿದರು. ಬಸವರಾಜ ಯಲಿಗಾರ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next