ಧಾರವಾಡ: ಚಿತ್ರ ಮಾಧ್ಯಮ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಡಾ| ವೀರಣ್ಣ ರಾಜೂರ ಹೇಳಿದರು.
ನಗರದ ಕವಿಸಂನಲ್ಲಿ ಹಿರಿಯ ಕಲಾವಿದ ರಾಮಣ್ಣ ಸೂರಿ ಅವರ ಡಿಜಿಟಲ್ ಕಲಾಕೃತಿಗಳು ಹಾಗೂ ಬಿ.ಜಿ.ಗುಜ್ಜಾರಪ್ಪ ಅವರ ಅಕ್ರಾಲಿಕ್ ಕಲಾಕೃತಿಗಳ ಐದು ದಿನಗಳ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡದ ಚಿತ್ರಕಲೆ ಕ್ಷೇತ್ರಕ್ಕೆ ಡಿ.ಬಿ ಹಾಲಭಾವಿಯವರಿಂದ ಹಿಡಿದು ಇಂದಿನ ಕಲಾವಿದರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕವಿಸಂ ಬದ್ಧತೆ ಇಟ್ಟುಕೊಂಡುಎಲ್ಲ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕಲಾ ಪ್ರದರ್ಶನಕ್ಕೆ ಯೋಗ್ಯವಾದ ಮ್ಯೂಜಿಯಂ ಮಾಡಬೇಕಿದೆ ಎಂದರು.
ತುಮಕೂರಿನ ಹಿರಿಯ ಕಲಾವಿದ ಪ್ರಭು ಹರಸೂರ ಮಾತನಾಡಿ, ಎಲ್ಲ ಕಲೆಗೆ ಮೂಲ ಕಲೆ ಚಿತ್ರಕಲೆ. ಹಿರಿಯ ಕಲಾವಿದರ ಚಿತ್ರಕಲೆಗಳ ಒಳಗಿನ ಸೂಕ್ಷ್ಮತೆಯನ್ನು ಗಮನಿಸುವಂತಾಗ ಬೇಕು. ಆವಾಗಲೇ ಕಲಾ ವಿದ್ಯಾರ್ಥಿಗಳು ತಮ್ಮ ಚಿತ್ರಕಲೆಯಲ್ಲಿ ಹೊಸತನ ತಂದುಕೊಳ್ಳಲು ಸಾಧ್ಯವಿದೆ ಎಂದರು.
Related Articles
ಕಲಾವಿದ ಬಿ.ಜಿ. ಗುಜ್ಜಾರಪ್ಪ ಮಾತನಾಡಿ, ಕಲಾವಿದ ಮಾತುಗಾರ ನಿರುವುದಿಲ್ಲ. ಭಾಷಣಕಾರನಿಗೆ ಹೇಗೆ ಪದಗಳು ಪುಂಕಾನುಪುಂಕವಾಗಿ ಅವರ ಬಾಯಲ್ಲಿ ಬರುತ್ತವೋ ಹಾಗೆ ಕಲಾವಿದನ ತಲೆಯಲ್ಲಿ ರೇಖೆಗಳು ತೆರೆತೆರೆಯಾಗಿ ಬರುತ್ತವೆ.ಕಲೆಯನ್ನು ಸರಿಯಾಗಿ ಬಳಸಿಕೊಂಡು ಒಳ್ಳೆಯ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.
ಕಲಾವಿದ ರಾಮಣ್ಣ ಸೂರಿ ಮಾತನಾಡಿ, ಡಿಜಿಟಲ್ ಚಿತ್ರಕಲೆಗೆ ಹೋಗುವವರು ಕ್ಯಾನವಾಸ್ದಲ್ಲಿ ಚಿತ್ರ ಬಿಡಿಸುವಲ್ಲಿ ಪರಿಣತಿ ಹೊಂದಿದವರಿರಬೇಕು. ಡಿಜಿಟಲ್ ಕಲೆಯಲ್ಲಿ ಬೇಕಾದಷ್ಟು ಅವಕಾಶಗಳಿವೆ. ತ್ವರಿತವಾಗಿ ಕಲೆ ಬಿಡಿಸಬಹುದು. ಅದೇ ಕ್ಯಾನವಾಸ್ನಲ್ಲಿ ಮಾಡುವಾಗ ತಿಂಗಳಾನುಗಟ್ಟಲೇ ಕೆಲಸ ಮಾಡಬೇಕಾಗುತ್ತದೆ ಎಂದರು.
ಬಿ. ಮಾರುತಿ ಪ್ರಾಸ್ತಾವಿಕ ಮಾತನಾಡಿದರು. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಹಾಲಭಾವಿ, ಡಾ|ಪಾರ್ವತಿ ಹಾಲಭಾವಿ, ಎಸ್. ಎಮ್ ಲೋಹಾರ, ಎಸ್.ಕೆ. ಪತ್ತಾರ, ಎಂ.ಆರ್.ಬಾಳಿಕಾಯಿ, ಎಚ್.ಎಫ್. ಚಿಕ್ಕಮಠ, ಡಾ|ಆನಂದ ಪಾಟೀಲ, ಬಿ.ಎಂ. ಪಾಟೀಲ, ಸುಪ್ರೀಯಾ ದೀಪಕ್ ಮುಂತಾದ ಹಿರಿಯ ಕಲಾವಿದರು ಪಾಲ್ಗೊಂಡಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಧಾರವಾಡ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಬಿ.ಹೆಚ್. ಕುರಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಇಂದಿನಿಂದ ಚಿತ್ರಕಲಾ ಪ್ರದರ್ಶನ
ಧಾರವಾಡ: ಇಲ್ಲಿಯ ಜೆಎಸ್ಸೆಸ್ ಹಾಲಬಾವಿ ಸ್ಕೂಲ್ ಆಫ್ ಆರ್ಟ್ನಲ್ಲಿ ಜೂ.23 ರಿಂದ ಜೂ.26ರವರೆಗೆ ಪೂಜಾ ನೇರಲೇಕರ, ಮಗಳು ಚೈತ್ರಾ ನೇರಲೇಕರ ಅವರ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮೋದ ನೇರಲೇಕರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.23ರಂದು ಬೆಳಿಗ್ಗೆ 10:00 ಗಂಟೆಗೆ ಹಾಲಬಾವಿ ಸ್ಕೂಲ್ ಆಫ್ ಆರ್ಟ್ ಕಾಲೇಜು ವಿಶ್ರಾಂತ ಪ್ರಾಚಾರ್ಯ ಎಸ್ .ಡಿ. ಹಾಲಬಾವಿ ಪ್ರದರ್ಶನಕ್ಕೆ ಚಾಲನೆ ನೀಡುವರು.
ಅತಿಥಿಗಳಾಗಿ ಪ್ರಾಚಾರ್ಯರಾದ ಡಾ|ಪಿ.ಎಂ. ಜಿಜೋ, ಡಾ|ಬಿ.ಎಂ.ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ. ಬಿರಾದಾರ ಪಾಲ್ಗೊಳ್ಳಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಲಾಸಕ್ತರು ಪ್ರದರ್ಶನದಲ್ಲಿ ಭಾಗವಹಿಸಬೇಕು. ಜೂ.23ರಿಂದ ಜೂ.26ರವರೆಗೆ ನಿತ್ಯ ಬೆಳಿಗ್ಗೆ 11:00 ರಿಂದ ಸಂಜೆ 4:00 ಗಂಟೆವರೆಗೆ ಕಲಾಕೃತಿಗಳ ಪ್ರದರ್ಶನ ಇರಲಿದೆ ಎಂದರು. ಪೂಜಾ ನೇರಲೇಕರ ಮಾತನಾಡಿ, ನಾನು ನನ್ನ ಮಗಳು ಇಬ್ಬರೂ ಒಟ್ಟಿಗೆ ತೆಗೆದಿರುವ 40ಕ್ಕೂ ಹೆಚ್ಚು ಪರಿಸರ, ಪ್ರಾಣಿ-ಪಕ್ಷಿ ಇತರೆ ರೀತಿಯ ಕಲಾಕೃತಿಗಳ ಪ್ರದರ್ಶನವನ್ನು ನಾನು ಕಲಿತ ಸಂಸ್ಥೆಯಲ್ಲಿಯೇ ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದರು.