Advertisement

ಶಾಲೆಗೂ ಸಂಕಷ್ಟ ತಂದ ಐಎಂಎ!

01:16 AM Jun 20, 2019 | Lakshmi GovindaRaj |

ಬೆಂಗಳೂರು: ಶತಮಾನದ ಇತಿಹಾಸ ಹೊಂದಿರುವ ರಾಜಧಾನಿಯ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಶಿವಾಜಿನಗರದ ಐತಿಹಾಸಿಕ ಪೊಲೀಸರ ಸರ್ಪಗಾವಲಿನಲ್ಲಿ ತರಗತಿಗಳು ನಡೆಯುತ್ತಿವೆ. ಹಲವು ದಿನಗಳಿಂದ ಆತಂಕದಿಂದಲೇ ಶಿಕ್ಷಕರು ಪಾಠ ಮಾಡುತ್ತಿದ್ದು, ವಿದ್ಯಾರ್ಥಿಗಳು ಕೂಡ ಅಷ್ಟೇ ಆತಂಕದಲ್ಲಿ ಪಾಠ ಆಲಿಸುತ್ತಿದ್ದಾರೆ.

Advertisement

ಶಿವಾಜಿನಗರದ ಸರ್ಕಾರಿ ವಿ.ಕೆ.ಓ ಶಾಲೆಯ ಸದ್ಯದ ಪರಿಸ್ಥಿತಿ ಹೀಗಿದೆ. ಇದಕ್ಕೆ ಕಾರಣ ಐಎಂಎ ಬಹುಕೋಟಿ ವಂಚನೆ ಹಗರಣದ ಆರೋಪಿ ಮನ್ಸೂರ್‌ ಖಾನ್‌. ಐಎಂಎ ವಂಚನೆ ಹಗರಣ ಬೆಳಕಿಗೆ ಬರುತ್ತಿದ್ದಂತೆ ಮನ್ಸೂರ್‌ ಖಾನ್‌ ದತ್ತು ಪಡೆದಿದ್ದ ವಿಕೆಓ ಶಾಲೆಯಲ್ಲೂ ಸಮಸ್ಯೆ ಶುರುವಾಗಿದೆ.

ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ನಡೆಸುವುದೇ ಕಷ್ಟವಾಗಿ ಪರಿಣಮಿಸಿದೆ. ಐಎಂಎ ನೇಮಕಾತಿ ಮಾಡಿಕೊಂಡಿದ್ದ ಶಿಕ್ಷಕರ ಪೈಕಿ ಹಲವರು ಈಗಾಗಲೇ ಶಾಲೆ ಬಿಟ್ಟು ಹೋಗಿದ್ದು, ಉಳಿದುಕೊಂಡವರಿಗೆ ವೇತನ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಸರ್ಕಾರಿ ಶಾಲೆಗಳ ಶಿಕ್ಷಕರು ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗೂ ಬೋಧಿಸಲು ಸಿದ್ಧರಿದ್ದಾರೆ. ಆದರೆ, ವಿದ್ಯಾರ್ಥಿಗಳ ಪೋಷಕರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ನಮಗೆ ಐಎಂಎ ಶಿಕ್ಷಕರೇ ಇರಲಿ ಎಂದು ಪಟ್ಟುಹಿಡಿದಿದ್ದಾರೆ.

ಆದರೆ, ಸರ್ಕಾರಿ ಶಾಲೆ ಆಗಿರುವುದಿಂದ ಅವರು ಸೇವೆಯಲ್ಲಿ ಮುಂದುವರಿಯಲು ಅವಕಾಶವೇ ಇಲ್ಲ. ಹೀಗಾಗಿ ಸಮಸ್ಯೆ ಉದ್ಭವವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.

Advertisement

ಐಎಂಎ ಸಿಬ್ಬಂದಿಯೇ ಇರಬೇಕು ಎಂದು ಪಟ್ಟುಹಿಡಿಯುವ ಪೋಷಕರು ಪ್ರತಿನಿತ್ಯ ಶಾಲೆಯ ಬಳಿ ಜಮಾಯಿಸುತ್ತಾರೆ ಪ್ರತಿಭಟನೆ ನಡೆಸುತ್ತಾರೆ. ಹೀಗಾಗಿ, ಮುಂಜಾಗ್ರಾತ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ಶಾಲಾ ಆವರಣದಲ್ಲಿಯೇ ಬೀಡುಬಿಟ್ಟಿದೆ. ಬುಧವಾರ ಕೂಡ ಹಲವು ಮಂದಿ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

1ರಿಂದ 10ನೇ ತರಗತಿಗೆ ಸಮಸ್ಯೆಯಿಲ್ಲ: ಶಾಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಬೇಸತ್ತ ಹಲವು ಮಂದಿ ಪೋಷಕರು ತಮ್ಮ ಮಕ್ಕಳ ಟಿ.ಸಿ ಪಡೆದು ಬೇರೆ ಕಡೆ ಸೇರಿಸಿದ್ದಾರೆ. ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳ ತರಗತಿಗಳು ಎಂದಿನಂತೆ ನಡೆಯುತ್ತಿವೆ. ಸರ್ಕಾರಿ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಐಎಂಎ ಘಟನೆ ನಡೆದ ಬಳಿಕ ಶಾಲೆಯಲ್ಲಿ ಶಾಂತಿಯುತ ಪರಿಸ್ಥಿತಿ ಮಾಯವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಹೇಳಿದರು.

ಬೇಗ್‌ ನಿವಾಸದ ಮುಂದೆ ಪ್ರತಿಭಟನೆ: ಐಎಂಎ ನೇಮಕ ಮಾಡಿದ್ದ ಶಿಕ್ಷಕರನ್ನೇ ಸೇವೆಯಲ್ಲಿ ಮುಂದುವರಿಸಬೇಕು ಹಾಗೂ ಈಗ ಉಂಟಾಗಿರುವ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಶಾಸಕ ರೋಷನ್‌ ಬೇಗ್‌ ನಿವಾಸದ ಮುಂದೆ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದರು.

ಸುಮಾರು 200ಕ್ಕೂ ಹೆಚ್ಚು ಪೋಷಕರು ಜಮಾಯಿಸಿ ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಶಾಸಕರ ಜತೆ ಪ್ರತಿಭಟನಾಕಾರರು ಸಮಾಲೋಚಿಸಿದರು. ಮುಂದಿನ ಹತ್ತುದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶಾಸಕರು ನೀಡಿರುವುದಾಗಿ ಶಾಸಕರ ಭೇಟಿಬಳಿಕ ಪ್ರತಿಭಟನಾಕಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next