ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾ. ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಭಾಗೀಯ ನ್ಯಾಯಪೀಠಕ್ಕೆ ವರ್ಗಾಯಿಸಿದೆ.
ಈ ಸಂಬಂಧ ಬೆಂಗಳೂರಿನ ಸಂಜಯನಗರ ನಿವಾಸಿ ಎಸ್.ಎಂ. ಇಕ್ಬಾಲ್ ಅಹ್ಮದ್ ಸೇರಿ ಇತರ 17 ಮಂದಿ ಹಾಗೂ ಚಿತ್ರದುರ್ಗ ಮೂಲದ ಹೂಡಿಕೆದಾರರ ಮೊಹಮ್ಮದ್ ಸಿರಾಜುದ್ದೀನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳು ಶುಕ್ರವಾರ ನ್ಯಾ. ಆರಾಧೆಯವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಐಎಂಎ ಸೇರಿ ಇತರ ಕಂಪೆನಿಗಳ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ಹಂತದಲ್ಲಿದೆ.
ಅದೇ ರೀತಿಯ ಮನವಿ ಹೊಂದಿರುವ ಬೇರೊಂದು ಅರ್ಜಿ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ಸಮಂಜಸವಲ್ಲ. ಆದ್ದರಿಂದ ಈ ಎರಡೂ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನ್ಯಾಯಪೀಠದ ಮುಂದೆ ಮಂಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದರು.
ಮನ್ಸೂರ್ ಅಹ್ಮದ್ ಖಾನ್ ರಾಜ್ಯದ ಕೆಲವು ಸಚಿವರು, ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳಿಗೆ ಆಪ್ತನಾಗಿದ್ದಾನೆ. ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆತನ ರಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿಯೇ ಆತ ಕೋಟ್ಯಂತರ ರೂ. ದೋಚಿ ದೇಶಬಿಟ್ಟು ಪರಾರಿಯಾಗಿದ್ದಾನೆ.
ಸ್ಥಳೀಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಈ ತನಿಖೆಯಿಂದ ವಂಚಿತರಿಗೆ ನ್ಯಾಯ ಸಿಗುವುದಿಲ್ಲ. ಆದ್ದರಿಂದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ವಹಿಸಬೇಕು ಎಂದು ಅರ್ಜಿಗಳಲ್ಲಿ ಮನವಿ ಮಾಡಲಾಗಿತ್ತು.