Advertisement

ವಿಡಿಯೋ ಮೂಲಕ ಮನ್ಸೂರ್‌ ಪ್ರತ್ಯಕ್ಷ: IMA ವಂಚಕನಿಂದ ಹೊಸ ಬಾಂಬ್‌

10:04 AM Jun 24, 2019 | Vishnu Das |

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌ ಹೊಸ ವಿಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದ್ದು,ಹಲವರಿಂದ ನನಗೆ ಮೋಸ ಆಗಿದೆ ಎಂದು ಹೇಳಿಕೊಂಡಿದ್ದಾನೆ.

Advertisement

ದುಬೈನಿಂದ ಬಿಡುಗಡೆ ಮಾಡಿದ್ದಾನೆ ಎನ್ನಲಾದ 18 ನಿಮಿಷದ ವಿಡಿಯೋದಲ್ಲಿ ಪ್ರಮುಖ ರಾಜಕಾರಣಿಗಳು ಮತ್ತು ಉದ್ಯಮಿಗಳು ನನಗೆ ವಂಚನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಜನರ ಹಣ ನುಂಗುವ ಸಂಸ್ಥೆಗಳು, ಸಾಮಾಜಿಕ ತಾಣಗಳ ಮೂಲಕ ನಮ್ಮ ಸಂಸ್ಥೆಗಳ ಹೆಸರು ಹಾಳು ಮಾಡಿದವರು, ನನ್ನ 12 ವರ್ಷಗಳ ಶ್ರಮ  ವ್ಯರ್ಥವಾಗುವಂತೆ ಮಾಡಿ ನನ್ನ ಸಂಸ್ಥೆಯನ್ನು ಮುಗಿಸಲು ಯತ್ನಿಸಿದ ಎಲ್ಲರಿಗೂ ಧನ್ಯವಾದಗಳು. ಅಲ್ಲಾಹು ಎಲ್ಲವನ್ನೂ ನೋಡುತ್ತಿದ್ದು ಸೂಕ್ತ ತೀರ್ಪು ನೀಡುತ್ತಾನೆ ಎಂದು ಮೊದಲಿಗೆ ಹೇಳಿಕೊಂಡಿದ್ದಾನೆ.

ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್‌ ಖಾನ್‌, ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಶರವಣ, ರಿಯಲ್‌ ಎಸ್ಟೇಟ್‌ ಉದ್ಯಮಿ ಫೈರೋಜ್‌ ಅಬ್ದುಲ್‌ , ಪ್ರಸ್ಟೀಜ್‌ ಗ್ರೂಪ್‌ ಮಾಲೀಕ ಇರ್ಫಾನ್‌, ಉಗ್ರರ ಜೊತೆ ಸಂಪರ್ಕ ಇರುವ ಮುಖ್ತಿಯಾರ್‌ ರೆಹಮಾನ್‌ ಸೇರಿ ಕೆಲವರ ಹೆಸರು ಹೇಳಿದ್ದಾನೆ.

ನನಗೆ ಯಾರ್ಯಾರು ತೊಂದರೆ ಕೊಟ್ಟಿದ್ದಾರೋ ಅವರೆಲ್ಲರ ಹೆಸರುಗಳ ಪಟ್ಟಿಯನ್ನು ತನಿಖಾಧಿಕಾರಿಗಳ ಮುಂದೆ ಇಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.

Advertisement

13 ವರ್ಷದಲ್ಲಿ 12 ಸಾವಿರ ಕೋಟಿ ರೂಪಾಯಿ ಲಾಭವನ್ನು ಹೂಡಿಕೆದಾರರಿಗೆ ನೀಡಿದ್ದೇನೆ.  ನನ್ನ ಬಳಿ ಈಗ 1,350 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.ಅದನ್ನುಮಾರಿ ಹೂಡಿಕೆದಾರರಿಗೆ ಹಣ ವಾಪಾಸ್‌ ನೀಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಸಚಿವ ಜಮೀರ್‌ ಅಹ್ಮದ್‌ ನನಗೆ ಸಹಾಯ ಮಾಡುವುದಾಗಿ ಹೇಳಿದ್ದರು ಆದರೆ ಸತ್ಯ ಬೇರೆಯದ್ದೇ ಇದ್ದು, ಅವರು ಯಾರೂ ನನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದರು.

ನನ್ನನ್ನು ಮುಗಿಸಲು ರಾಜಕಾರಣಿಗಳು ಮುಂದಾಗಿದ್ದರು. ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ನನ್ನ ಹತ್ಯೆಯಾಗಬಹುದು. ನಾನು ಭಾರತಕ್ಕೆ ಬಂದರೆ ನನ್ನನ್ನು ಜೀವ ಸಹಿತವಾಗಿ ಬಿಡುವುದಿಲ್ಲ. ನನ್ನ ಕಚೇರಿಗೂ ಹಲವರು ಬಂದು ನನ್ನ ಹತ್ಯೆಗೆ ಸಂಚು ಮಾಡಿದ್ದರು ಎಂದು ಹೇಳಿದ್ದಾನೆ.

ಜೂನ್‌ 14 ರಂದು ಭಾರತಕ್ಕೆ ಬರಲು ಪ್ರಯತ್ನಿಸಿದೆ, ಆದರೆ ಪಾಸ್‌ಪೋರ್ಟ್‌ ಅಮಾನತು ಮಾಡಿದ್ದರಿಂದ ಸಾಧ್ಯವಾಗಲಿಲ್ಲ ಎಂದಿದ್ದಾನೆ. ಅಲ್ಲಾಹುವಿನ ಕೃಪೆಯಿಂದ ನಾನು ಚೆನ್ನಾಗಿದ್ದೇನೆ. ನನ್ನ ಮಾನಸಿಕ ಸ್ಥಿತಿ ಚೆನ್ನಾಗಿ ಇದೆ ಎಂದು ಹೇಳಿಕೊಂಡಿದ್ದಾನೆ.

ನನ್ನ ಚಿನ್ನವನ್ನು ಬೇರೆಡೆಗೆ ಸಾಗಿಸಲಾಗಿದೆ. ನನಗೆ ನನ್ನ ಡೈರೆಕ್ಟರ್ಸ್‌ ಮತ್ತು ಸಹೋದರರ ಮೇಲೆ ಅನುಮಾನವಿದೆ ಎಂದು ಹೇಳಿದ್ದಾನೆ.

ಅಲೋಕ್‌ ಕುಮಾರ್‌ ಅವರು ನನಗೆ ಕರೆ ಮಾಡಬಹುದು, ಹಿಂದಿನ ನನ್ನ ಮೊಬೈಲ್‌ ಸಂಖ್ಯೆಯಲ್ಲಿ ನಾನು ಲಭ್ಯವಿರುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಮನ್ಸೂರ್‌ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next