Advertisement

ಸಿಎಂ ಹುದ್ದೆ ನಿಭಾಯಿಸಲು ನಾನು ರೆಡಿ: ಪರಂ

06:05 AM Nov 18, 2018 | |

ದಾವಣಗೆರೆ/ಬೆಳಗಾವಿ: “ಹೈಕಮಾಂಡ್‌ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ’ ಎಂದು ಉಪ ಮುಖ್ಯಮಂತ್ರಿ, ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಬೆಳಗಾವಿಯಲ್ಲಿ ಶನಿವಾರ ನಡೆದ ಕೆಎಸ್‌ಆರ್‌ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವ ನನಗಿದೆ. ಹೈಕಮಾಂಡ್‌ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ. ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದರು.

ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಚಳಿಗಾಲದ ಅಧಿವೇಶನದ ಒಳಗೆ ಅಂದರೆ, ನವೆಂಬರ್‌ ಮಾಸಾಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಖಾಲಿ ಇರುವ ಕಾಂಗ್ರೆಸ್‌ನ 8 ಹಾಗೂ ಜೆಡಿಎಸ್‌ನ ಇಬ್ಬರು ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗುವುದು. ಬೆಳಗಾವಿ ಸೇರಿ ಬೇರೆ ಜಿಲ್ಲೆಯ ಆಕಾಂಕ್ಷಿಗಳಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗುವುದು. ಜತೆಗೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕವನ್ನೂ ಮಾಡಲಾಗುವುದು ಎಂದರು.

ಹೇಳಿಕೆ ತಪ್ಪಾಗಿ ವ್ಯಾಖ್ಯಾನಿಸುವ ಅಗತ್ಯವಿಲ್ಲ
ಇದೇ ವೇಳೆ, ದಾವಣಗೆರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪರಮೇಶ್ವರ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಅವಕಾಶ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ನಿಭಾಯಿಸಲು ಸಿದ್ಧ ಎಂಬ ಪರಮೇಶ್ವರ್‌ ಅವರ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸುವ ಅಗತ್ಯ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ಅನೇಕರು ಸಮರ್ಥರಿದ್ದಾರೆ. ಅವರಲ್ಲಿ ಡಾ|ಜಿ. ಪರಮೇಶ್ವರ್‌ ಸಹ ಒಬ್ಬರು. ಹಾಗಾಗಿ, ಪಕ್ಷದ ಹೈಕಮಾಂಡ್‌ ಅವಕಾಶ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ನಿಭಾಯಿಸಲು ಸಿದ್ಧ ಎಂದು ಸಂದರ್ಭಕ್ಕೆ ಅನುಗುಣವಾಗಿ ಹೇಳಿದ್ದಾರೆ. ಅವರ ಈ ಮಾತನ್ನು ತಪ್ಪಾಗಿ ವ್ಯಾಖ್ಯಾನ ಮಾಡುವ ಅಗತ್ಯ ಇಲ್ಲ ಎಂದರು.

ರಾಜ್ಯದಲ್ಲಿ ಸಾಕಷ್ಟು ಸರ್ಕಾರಗಳು ಬಂದಿವೆ, ಹೋಗಿವೆ. ಮುಖ್ಯಮಂತ್ರಿಗಳು ಆಗಿ, ಹೋಗಿದ್ದಾರೆ. ನಾನೂ ಒಳಗೊಂಡಂತೆ ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತ ಅಲ್ಲ. ಪರಮೇಶ್ವರ್‌ ಅವರು ಆ ರೀತಿ ಹೇಳಿಕೆ ನೀಡಿರುವುದು ನನಗೆ ತಪ್ಪು ಅಂತ ಅನಿಸುತ್ತಿಲ್ಲ ಎಂದರು.

Advertisement

ಅನಿತಾ ಕುಮಾರಸ್ವಾಮಿಯವರು ಸಚಿವರಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ. ರಾಮನಗರ ಶಾಸಕಿಯಾಗಿದ್ದೇನೆ. ಕ್ಷೇತ್ರದ ಕೆಲಸ ಮಾಡಿಸುತ್ತೇನೆ ಎಂಬುದಾಗಿ ಹೇಳಿದ್ದಾರೆಯೇ ಹೊರತು ನಾನೂ ಸಚಿವೆ ಆಗುತ್ತೇನೆ ಎಂದು ಹೇಳಿಲ್ಲ.
– ಎಚ್‌.ಡಿ.ಕುಮಾರಸ್ವಾಮಿ, ಸಿಎಂ.

ಸಿಎಂ ಆಸೆ ತಪ್ಪಲ್ಲ- ಡಿಕೆಶಿ
ಬೆಂಗಳೂರು
: ಮುಖ್ಯಮಂತ್ರಿ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಅದು ತಪ್ಪಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು. ಐದು ವರ್ಷಗಳ ಕಾಲ ಜೆಡಿಎಸ್‌ ಅವರಿಗೆ ಸಿಎಂ ಹುದ್ದೆ ಬರೆದುಕೊಟ್ಟಿದ್ದೇವೆ. ಆ ಮಾತಿನಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನಗಂತೂ ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಅರ್ಜೆಂಟ್‌ ಇಲ್ಲ. ಅವರ ಅಭಿಪ್ರಾಯದ ಬಗ್ಗೆ ನಾನು ಏನನ್ನೂ ಹೇಳಲ್ಲ ಎಂದು ತಿಳಿಸಿದರು.

ಕೇಂದ್ರ ತನಿಖಾ ಸಂಸ್ಥೆಯ ಒಂದರಿಂದ ನನಗೆ ನೋಟಿಸ್‌ ಬಂದಿದೆ. ಅದಕ್ಕೆ ನಾನು ಉತ್ತರಿಸಲು ಸಮರ್ಥನಿದ್ದೇನೆ.  ಬೇರೆ ಬೇರೆ ಸಂದರ್ಭಗಳಲ್ಲಿ ಅವರು ನನ್ನಿಂದ ಉತ್ತರ ಪಡೆದುಕೊಂಡಿದ್ದಾರೆ. ಈಗ ಬಂದಿರುವ ನೋಟಿಸ್‌ಗೂ ಉತ್ತರಿಸುತ್ತೇನೆ. ದುರುದ್ದೇಶದಿಂದ ನನಗೆ ನೋಟಿಸ್‌ ನೀಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಬಹಳಷ್ಟು ವಿಚಾರಗಳು ಹೇಳಬೇಕಿದ್ದು ಸಮಯ ಬಂದಾಗ ಹೇಳುತ್ತೇನೆ.
– ಡಿ.ಕೆ.ಶಿವಕುಮಾರ್‌, ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next