Advertisement

ನಾಡಧ್ವಜಕ್ಕಾಗಿ ನಾನೂ ವಕೀಲಿಕೆಗೆ ಸಿದ್ಧ: ಮುಖ್ಯಮಂತ್ರಿ

10:49 AM Jul 21, 2017 | Team Udayavani |

ಹುಬ್ಬಳ್ಳಿ: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಕುರಿತ ಸಮಿತಿ ರಚನೆಯನ್ನು ಮತ್ತೂಮ್ಮೆ ಬಲವಾಗಿ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ,
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಈ ಕುರಿತು ನಾನೂ ಒಬ್ಬ ವಕೀಲನಾಗಿ ವಾದ ಮಾಡಲು ಸಿದ್ಧ ಎಂದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾಡಧ್ವಜ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ.
ಅವರಿಗೆ ಸಂವಿಧಾನ ಗೊತ್ತಿಲ್ಲ. ರಾಜ್ಯಕ್ಕೆ ಪ್ರತ್ಯೇಕ ಬಾವುಟ ಇರಬೇಕೆಂಬುದು ಬಹಳ ವರ್ಷಗಳ ಬೇಡಿಕೆಯಾಗಿದೆ. ಈಗಾಗಲೇ ರಾಜ್ಯಕ್ಕೆ ಒಂದು ಧ್ವಜವಿದೆ. ಆದರೆ, ಅದಕ್ಕೆ ಮಾನ್ಯತೆ ಪಡೆಯಬೇಕಿದೆ. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಸೇರಿ ಹಲವರು
ಬಾವುಟದ ಬಗ್ಗೆ ಕೋರಿದ್ದರು ಎಂದರು. ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ರೂಪಿಸುವ ಕುರಿತು ರಚನೆ ಮಾಡಿದ ಸಮಿತಿ ವರದಿ ನೀಡಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯ ಇರುವ ಕನ್ನಡ ಬಾವುಟಕ್ಕೆ ಮಾನ್ಯತೆ ಇಲ್ಲ. ಕನ್ನಡ ಬಾವುಟಕ್ಕೆ
ಮಾನ್ಯತೆ ಪಡೆಯುವುದು ನಮ್ಮ ಉದ್ದೇಶವಾಗಿದೆ ಎಂದರು.

ಡರ್ಟಿ ಪಾಲಿಟಿಕ್ಸ್‌: ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿದರೆ ಕಳಸಾ-ಬಂಡೂರಿ ವಿವಾದ ಇತ್ಯರ್ಥ ಸಾಧ್ಯ. ಈ ಕುರಿತು ಈಗಾಗಲೇ ಮೋದಿಗೆ 2 ಬಾರಿ ಪತ್ರ ಬರೆದಿದ್ದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾತುಕತೆಗೆ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದರೆ ಗೋವಾದ ನೀರಾವರಿ ಸಚಿವರು ಉತ್ತರ ನೀಡುತ್ತಾರೆ. ಇದು ಗೋವಾ ಸರ್ಕಾರದ ಡರ್ಟಿ ಪಾಲಿಟಿಕ್ಸ್‌ ಎಂದು ಕಿಡಿಕಾರಿದರು.

ಲಿಂಗಾಯತ ಧರ್ಮ ಎನ್ನುವುದೇ ಸೂಕ್ತ: ಸಿದ್ದು 

ಧಾರವಾಡ: ರಾಜ್ಯದಲ್ಲಿ ವೀರಶೈವ ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಚರ್ಚೆ ನಡೆಯುತ್ತಿದ್ದು, ಈ ಪೈಕಿ ಲಿಂಗಾಯತ ಧರ್ಮ ಎನ್ನುವುದೇ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದಕ್ಕೆ ಮತ್ತು ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಿದ್ದಕ್ಕೆ ಇಲ್ಲಿನ ಮುರುಘಾಮಠದಲ್ಲಿ ಶ್ರೀಮಠದಿಂದ ಗುರುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಸವಣ್ಣ 12ನೇ ಶತಮಾನದಲ್ಲಿಯೇ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದ ಹೊರ ಬಂದು ಸಮಾನತೆ ಸಮಾಜ ಕಟ್ಟಲು ಲಿಂಗಾಯತ ಧರ್ಮ ಸ್ಥಾಪಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ವೀರಶೈವ ಮಹಾಸಭಾ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ
ಕೆಲವರು ವೀರಶೈವ ಲಿಂಗಾಯತ ಧರ್ಮ ಎಂದು ಶಿಫಾರಸು ಮಾಡುವಂತೆ ಸಲಹೆ ನೀಡಿದ್ದರು. ಆದರೆ, ತನ್ನ ದೃಷ್ಟಿಯಲ್ಲಿ
ಹೇಳುವುದಾದರೆ ಲಿಂಗಾಯತ ಧರ್ಮ ಎನ್ನುವುದೇ ಸೂಕ್ತ ಎಂದರು. ಶೀಘ್ರವೇ ಈ ಕುರಿತು ಮಹತ್ವದ ಸಭೆ ಕರೆದು ತಜ್ಞರು, ವಿದ್ವಾಂಸರು ಮತ್ತು ಸಮಾಜದ ಮುಖಂಡರೊಂದಿಗೆ ಚರ್ಚಿಸುತ್ತೇನೆ. ಅಂತಿಮವಾಗಿ ಎಲ್ಲರೂ ಯಾವ ನಿರ್ಣಯ
ತೆಗೆದುಕೊಳ್ಳುತ್ತಾರೋ, ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತಾನು ಸಿದ್ಧನಿದ್ದೇನೆ ಎಂದರು.

ಹಿಂದೂ ಧರ್ಮವೇ ಇಲ್ಲ: ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಹಿಂದೂ ಧರ್ಮವೇ ಇಲ್ಲ. ಶ್ರೇಣಿಕೃತ ಸಮಾಜದಲ್ಲಿದ್ದ ಶೋಷಣೆ ವಿರುದ್ಧ ಬಸವಣ್ಣ ಹೋರಾಟ ನಡೆಸಿ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next