ಬೆಂಗಳೂರು: ಸತತ ಮೂರು ದಿನಗಳ ಐವತ್ತು ಗಂಟೆಗಳಷ್ಟು ಕಾಲ “ಗೃಹಬಂಧನ’ದಲ್ಲಿದ್ದು ಆದಾಯ ತೆರಿಗೆ ಇಲಾಖೆ ದಾಳಿಯಿಂದ ಜರ್ಜರಿತರಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.ಆದರೆ ಯಾವುದೇ ವಿಚಾರವನ್ನು ಹೇಳದ ಅವರು ‘ನಾನೀಗ ಏನನ್ನೂ ಮಾತನಾಡುವುದಿಲ್ಲ. ಸತ್ಯಾಂಶ ಹೊರಗೆ ಬರುತ್ತದೆ ಕಾದು ನೋಡಿ’ ಎಂದರು.
ಸದಾಶಿವ ನಗರದ ನಿವಾಸದಿಂದ ಹೊರ ಬಂದ ವೇಳೆ ಸುದ್ದಿಗಾರರು ಸುತ್ತುವರಿದಾಗ ಉತ್ತರಿಸಿದ ಡಿ.ಕೆ ಶಿವಕುಮಾರ್ ”ಎಲ್ಲರಿಗೂ ಧನ್ಯವಾದ ಕಳೆದ 3 ದಿನಗಳಿಂದ ತಾವೆಲ್ಲಾ ನನ್ನ ಮನೆ, ನನ್ನ ಸ್ನೇಹಿತರು ಮತ್ತು ಸಂಬಂಧಿಕರ ಮನೆ ಎಲ್ಲಾ ಕಡೆ ಕೂಡ ಹಗಲು ರಾತ್ರಿ ಕಾದಿದ್ದೀರಿ, ಮಾಧ್ಯಮ ಮಿತ್ರರು, ಪೊಲೀಸರಿಗೆ ನನ್ನ ಅಭಿನಂದನೆಗಳು.ನನ್ನಿಂದ ನಿಮಗೆಲ್ಲಾ ಬೇಕಷ್ಟು ತೊಂದರೆಯಾಗಿದೆ, ಧನ್ಯವಾದಗಳು” ಎಂದರು.
‘ಮಾಧ್ಯಮದವರು ತಮ್ಮದೇ ಆದ ವಿಚಾರ ಚಿತ್ರಿಸಿದ್ದೀರಿ. ಈಗ ನಾನು ಏನು ಮಾತನಾಡುವ ಸಂದರ್ಭದಲ್ಲಿ ಇಲ್ಲ. ನನಗೆ ಯಾರ್ಯಾರು ಬೆಂಬಲ ಕೊಟ್ಟಿದ್ದೀರಿ, ವಿಶೇಷವಾಗಿ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು, ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ನನ್ನ ಕಷ್ಟ ಕಾಲದಲ್ಲಿ ನಿಂತಿದ್ದಾರೆ ಅವರಿಗೆ ಧನ್ಯವಾದಗಳು’ ಎಂದರು.
‘ನಾನು ಕಾನೂನು ಚೌಕಟ್ಟು, ಸಂವಿಧಾನ ಬಿಟ್ಟು ನಡೆಯುವ ವ್ಯಕ್ತಿ ಅಲ್ಲ, ನನ್ನ ಮನೆಯಲ್ಲಿ ಏನು ಸಿಕ್ಕಿದೆ, ದೆಹಲಿಯಲ್ಲಿ ಏನು ಸಿಕ್ಕಿದೆ ಎನ್ನುವ ಕುರಿತು ಪಂಚನಾಮೆ ಬಂದ ಮೇಲೆ ಕಾಪಿ ತೆಗೆದುಕೊಂಡು ನಾನು ಮಾತನಾಡುತ್ತೇನೆ.ನಿಮ್ಮನ್ನೆಲ್ಲಾ ಕರೆಯುತ್ತೇನೆ’ ಎಂದರು.
‘ಈಗ ಏನೂ ಹೇಳುವುದಿಲ್ಲ, ದಾಖಲೆಗಳನ್ನು ಮಾತ್ರ ಹೇಳಬೇಕು. ಪ್ರತಿಯೊಬ್ಬರಿಗೂ ಉತ್ತರ ಕೊಡಲು ಸಿದ್ದನಿದ್ದೇನೆ.ರಾತ್ರಿಯೆಲ್ಲಾ ಕಾದಿದ್ದೀರಿ, ನಿಮ್ಮ ಮನಸ್ಸಿಗೆ ತೋಚಿದ್ದನ್ನು ಬರೆದಿದ್ದೀರಿ .ಕೆಟ್ಟದ್ದಾಗಿ ಚಿತ್ರ ಮಾಡಬಹುದು,ಒಳ್ಳೆಯ ಚಿತ್ರವನ್ನೂ ಬರೆಯಬಹುದು ಆದರೆ ಸತ್ಯಾಂಶ ಮುಚ್ಚಿಡಲು ಸಾಧ್ಯವಿಲ್ಲ’ ಎಂದರು.
ನಂಬಿರುವ ದೇವರತ್ರ ಹೋಗುತ್ತಿದ್ದೇನೆ !
‘ನಾನೀಗ ನಂಬಿರುವ ಒಂದು ಶಕ್ತಿ ಇದೆ.ದೇವಸ್ಥಾನಕ್ಕೆ ಹೋಗಬೇಕಾಗಿದೆ. ಆ ಬಳಿಕ ನನ್ನ ಬೆಂಬಲಕ್ಕೆ ನಿಂತ ಶಾಸಕರ ಭೇಟಿ ಮಾಡುತ್ತೇನೆ’ ಎಂದರು. ಯಾವ ದೇವಸ್ಥಾನ ಎಂದು ನಾನು ಹೇಳುವುದಿಲ್ಲ ಎಂದರು.
ಅಂತೂ ಮುಗಿದ ಐಟಿ ಪರಿಶೀಲನೆ!
ಶಿವಕುಮಾರ್ ನಿವಾಸದಲ್ಲಿ ಶನಿವಾರ ಬೆಳಗ್ಗೆ ಐಟಿ ಅಧಿಕಾರಿಗಳ ಪರಿಶೀಲನೆ ಅಂತ್ಯಗೊಂಡಿದ್ದು, ಅಧಿಕಾರಿಗಳು ಸಿಆರ್‌ಪಿಎಫ್ ಪಡೆಗಳ ಭದ್ರತೆಯಲ್ಲಿ ಅಪಾರ ದಾಖಲೆಗಳ ಸಮೇತ ತೆರಳಿರುವುದಾಗಿ ವರದಿಯಾಗಿದೆ.