ಗೋಲ್ಡ್‌ಕೋಸ್ಟ್: “ಗೋಲ್ಡ್ ಕೋಸ್ಟ್ ಕ್ರೀಡಾ ಗ್ರಾಮ ಪ್ರವೇಶಿಸಲು ತಂದೆಗೆ ಅವಕಾಶ ನೀಡಬೇಕೆಂಬ ವಿವಾದಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ರೀತಿಯ ವಿಷಾದವಿಲ್ಲ. ನಾನು ಯಾವತ್ತಿಗೂ ತಂದೆಯ ಪರವಾಗಿ ನಿಲ್ಲುತ್ತೇನೆ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
“ತಂದೆಯ ಪರ ನಿಂತ ವಿವಾದಕ್ಕೆ ನಾನು ಯಾವತ್ತಿಗೂ ತಲೆ ಕೆಡಿಸಿ ಕೊಳ್ಳುವುದಿಲ್ಲ. ನಾನೊಂದು ವೇಳೆ ದೇಶಕ್ಕಾಗಿ ಪದಕ ಗೆಲ್ಲದಿದ್ದರೆ ದೇಶಕ್ಕಿಂತಲೂ ಈಕೆಗೆ ತಂದೆಯೇ ಮುಖ್ಯವಾಗಿತ್ತು ಎಂದು ಜನ ದೂರುತ್ತಿದ್ದರು’ ಎಂದು ಗೇಮ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ವಿರುದ್ಧ ಜಯ ದಾಖಲಿಸಿ ಚಿನ್ನ ಗೆದ್ದ ಬಳಿಕ ಸೈನಾ ಭಾವುಕರಾಗಿ ನುಡಿದರು.
ತಂದೆ ಹರ್ವೀರ್ ಸಿಂಗ್‌ಗೆ ಗೋಲ್ಡ್‌ಕೋಸ್ಟ್ ಕ್ರೀಡಾ ಗ್ರಾಮಕ್ಕೆ ಪ್ರವೇಶ ನಿರಾಕರಿಸಿದ ಸಂದರ್ಭವನ್ನು ಸ್ಮರಿಸಿಕೊಂಡ ಸೈನಾ, “ಒಂದು ವಿಚಾರ ನಡೆಸಿಕೊಡಲಾಗದಿದ್ದರೂ ಎಲ್ಲವನ್ನೂ ನಡೆಸಿಕೊಟ್ಟಿದ್ದೇವೆ ಎಂದು ಯಾಕೆ ಹೇಳುತ್ತೀರಿ? ತಂದೆಗೆ ಹೊಟೇಲ್ ಬುಕ್ ಮಾಡುವಾಗ ನನಗೆಷ್ಟು ನೋವಾಯಿತು, ಸಮಸ್ಯೆಯಾಯಿತು ಎನ್ನುವುದು ನನಗಷ್ಟೇ ಗೊತ್ತು. ಅವರಿಗೆ ವೈಯಕ್ತಿಕ ಕೋಚ್ ಮಾನ್ಯತೆ ಲಭಿಸಲೂ ದೀರ್ಘ ಕಾಲಾವಕಾಶ ತೆಗೆದುಕೊಳ್ಳಲಾಯಿತು. ನಾನೆಲ್ಲವನ್ನೂ ನಿಭಾಯಿಸಿದೆ’ ಎಂದು ಹೇಳಿದರು.
“ಈ ವಿವಾದಕ್ಕೆ ಸಂಬಂಧಿಸಿ ನಾನು ಎರಡು ದಿನ ಚಿಂತೆಗೊಳಗಾಗಿದ್ದೆ. ಸರಿಯಾಗಿ ನಿದ್ದೆ ಮಾಡಲೂ ನನ್ನಿಂದ ಸಾಧ್ಯವಾಗಲಿಲ್ಲ. ಕ್ರೀಡಾಗ್ರಾಮದಲ್ಲಿ ಒಂದೆಡೆ ಮೂರು-ನಾಲ್ಕು ಗಂಟೆ ತಾಳ್ಮೆಯಿಂದ ಕುಳಿತುಕೊಳ್ಳುವುದಕ್ಕೂ ನನ್ನಿಂದಾಗಲಿಲ್ಲ. ಯಾಕೆಂದರೆ ನಾನು ಸರಕಾರಿ ಸಿಬಂದಿಯಲ್ಲ, ನಾನೊಬ್ಬಳು ಆಟಗಾರ್ತಿ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು’ ಎಂದು ವಿವಾದದ ಸಂದರ್ಭ ತಾನು ಅನು ಭವಿಸಿದ ಮಾನಸಿಕ ತೊಳಲಾಟ ಗಳನ್ನು ಸೈನಾ ತೆರೆದಿಟ್ಟರು.