Advertisement

ಮರಳು ಅಕ್ರಮ ಸಾಗಾಟಕ್ಕೆ ಬೀಳದ ಅಂಕುಶ-ದೂರು

12:29 PM May 09, 2022 | Team Udayavani |

ಚಿಂಚೋಳಿ: ಕಾಗಿಣಾ-ಮುಲ್ಲಾಮಾರಿ ನದಿಯಲ್ಲಿರುವ ಬೆಲೆ ಬಾಳುವ ಕೆಂಪು ಮರಳನ್ನು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಅಕ್ರಮ ಮರಳು ಮಾರಾಟಗಾರರು ಎಗ್ಗಿಲ್ಲದೇ ಸಾಗಾಟ ಮಾಡುತ್ತಿದ್ದಾರೆ.

Advertisement

ಪೋತಂಗಲ್‌, ಹಲಕೋಡಾ, ಜಟ್ಟೂರ ಗ್ರಾಮಗಳ ಬಳಿಯ ಈ ಕೆಂಪು ಉಸುಕಿಗೆ ಚಿನ್ನದ ಬೆಲೆಯಿದೆ. ಅನೇಕ ವರ್ಷಗಳಿಂದ ರಾತ್ರಿ-ಹಗಲು ಎನ್ನದೇ ಲಾರಿ, ಟಿಪ್ಪರ್‌, ಟ್ರ್ಯಾಕ್ಟರ್‌, ಆಟೋ, ಟಂಟಂಗಳಲ್ಲಿ ಜೆಸಿಬಿ ಯಂತ್ರಗಳಿಂದ ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿರುವ ಅಕ್ರಮ ಮಾರಾಟಗಾರರಿಗೆ ಕಂದಾಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡು ಬಿಸಿಮುಟ್ಟಿಸುತ್ತಿಲ್ಲ ಎಂದು ಜಟ್ಟೂರ ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ದೂರಿದ್ದಾರೆ.

ಕಾಗಿಣಾ-ಮುಲ್ಲಾಮಾರಿ ನದಿಯಲ್ಲಿ ದೊರೆಯುವ ಉಸುಕು ಮಾರಾಟ ತಡೆಯುವಂತೆ ಸೇಡಂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿಪ್ಪರ್‌, ಲಾರಿಗಳಲ್ಲಿ 30 ರಿಂದ 40 ಟನ್‌ ಉಸುಕು ತುಂಬಿಕೊಂಡು ಸಾಗುತ್ತಿರುವುದರಿಂದ ಗ್ರಾಮಗಳ ರಸ್ತೆಗಳು, ಚರಂಡಿಗಳು ಹಾಳಾಗಿವೆ. ಅಲ್ಲದೇ ಕೆಲವು ಲಾರಿಗಳು ಮನೆ ಗೋಡೆ ಗಳಿಗೆ ಗುದ್ದಿದ ಪರಿಣಾಮ ಗೋಡೆಗಳು ಅಧ್ರವಾಗಿವೆ. ಇದೇ ಮಾರ್ಗದಲ್ಲಿ ಚಿಕ್ಕ ಮಕ್ಕಳು ಓಡಾಡುವುದರಿಂದ ಜೀವ ಭಯದಲ್ಲೇ ಗ್ರಾಮಸ್ಥರು ದಿನದೂಡುವಂತಾಗಿದೆ.

ಮುಲ್ಲಾಮಾರಿ ನದಿ ಭೂಯ್ನಾರ (ಬಿ), ಅಡಕಿ ಮೋಕ ತಾಂಡಾ, ಡೊಂಗರು ನಾಯಕ ತಾಂಡಾ, ಕೊಟಗಾ, ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಅಣವಾರ, ಗಂಗನಪಳ್ಳಿ, ಭಕ್ತಂಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಬುರುಗಪಳ್ಳಿ, ಚತ್ರಸಾಲ, ಖರ್ಚಖೇಡ, ಜಟ್ಟೂರ, ಪೋತಂಗಲ್‌, ಹಲಕೋಡಾ ಗ್ರಾಮಗಳ ವರೆಗೆ ಹರಿಯುತ್ತದೆ. ಈ ನದಿಯಲ್ಲಿರುವ ಕರಿ ಉಸುಕನ್ನು ಟ್ರ್ಯಾಕ್ಟರ್‌ ಗಳಲ್ಲಿ ತುಂಬಿಕೊಂಡು ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ನಂಬರ್‌ ಇಲ್ಲದ ಟ್ರ್ಯಾಕ್ಟರ್‌ಗಳು, ಆಟೋ, ಟ್ರ್ಯಾಲಿ, ಟಂಟಂಗಳಲ್ಲಿ ಉಸುಕು ತುಂಬಿದ ಚೀಲಗಳನ್ನು ಸಾಗಿಸಲಾಗುತ್ತಿದೆ. ಕರಿ ಉಸುಕು ಒಂದು ಟ್ರ್ಯಾಕ್ಟರಿಗೆ 4 ಸಾವಿರ ರೂ.ವರೆಗೂ ಮಾರಾಟವಾಗುತ್ತಿದೆ.

Advertisement

ಮಧ್ಯರಾತ್ರಿ 12ಗಂಟೆಯಿಂದ ಉಸುಕು ತುಂಬಿದ ಟ್ರ್ಯಾಕ್ಟರ್‌ಗಳ ಓಡಾಟ ಪಟ್ಟಣದ ಅಂಬೇಡ್ಕರ್‌ ಚೌಕ್‌, ಬಸವೇಶ್ವರ ಚೌಕ್‌, ಕನಕದಾಸ ಚೌಕ್‌, ಗಾಂಧಿ ಚೌಕ್‌ ಹತ್ತಿರ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಕುರಿತು ಪೊಲೀಸರು ಯಾಕೆ ಪರಿಶೀಲಿಸುತ್ತಿಲ್ಲ ಎಂದು ಪಾಟೀಲ ಪ್ರಶ್ನಿಸಿದ್ದಾರೆ.

ಗಡಿಪ್ರದೇಶ ಕುಂಚಾವರಂ, ಮಲಚೆಲಮಾ, ಪೋಚಾವರಂ, ತಟ್ಟೆಪಳ್ಳಿ, ಶಾದೀಪುರ, ಭಿಕ್ಕುನಾಯಕ ತಾಂಡಾ, ಚಂದುನಾಯಕ ತಾಂಡಾಗಳಲ್ಲಿ ಕೆಂಪು ಮಣ್ಣು ಅಗೆದು ಸಿಮೆಂಟ್‌ ಕಂಪನಿಗಳಿಗೆ ಸಾಗಿಸುತ್ತಿರುವ ಲಾರಿಗಳನ್ನು ಸಾರ್ವಜನಿಕರೇ ರಾತ್ರಿ ವೇಳೆ ಹಿಡಿದು ಕುಂಚಾವರಂ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದರು. ಆದರೆ ಮಿರಿಯಾಣ, ಚಿಂಚೋಳಿ, ಚಿಮ್ಮನಚೋಡ ಠಾಣೆಗಳ ವಾಪ್ತಿಯಲ್ಲಿ ಅಕ್ರಮ ಉಸುಕು ಮಾರಾಟ ದಂಧೆಗೆ ಕಡಿವಾಣ ಇಲ್ಲದಂತಾಗಿದೆ.

ಈ ಹಿಂದೆ ಚಿಮ್ಮನಚೋಡ ಗ್ರಾಮದಲ್ಲಿ ನಡೆದ “ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮದಲ್ಲಿ ಚಿಮ್ಮನಚೋಡ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ನದಿಯಿಂದ ಉಸುಕು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಗ್ರಾಮಸ್ಥರ ಪರವಾಗಿ ಸಂಗಾರೆಡ್ಡಿ, ಶರಣರೆಡ್ಡಿ ಮೊಗಲಪ್ಪನೋರ ಎಸ್‌ಪಿ ಇಶಾ ಪಂತ್‌ ಗಮನಕ್ಕೆ ತಂದಿದ್ದರು. ಮುಲ್ಲಾಮಾರಿ ನದಿಯಲ್ಲಿನ ಉಸುಕು ಲೂಟಿ ಆಗುತ್ತಿರುವುದರಿಂದ ಅಂತರ್ಜಲ ಕಡಿಮೆಯಾಗುತ್ತಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ನದಿಯಲ್ಲಿನ ತೆಗ್ಗುಗಳಲ್ಲಿ ಜನರು ಮತ್ತು ದನಕರುಗಳು ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಆದ್ದರಿಂದ ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.

ಹಗಲು ರಾತ್ರಿ ಅಕ್ರಮ ಮರಳುಗಾರಿಕೆ ಕುರಿತು ನಿಗಾ ವಹಿಸಲಾಗಿದೆ. ಗ್ರಾಮ ಲೆಕ್ಕಿಗರಿಗೂ ಈ ಕುರಿತು ಲಕ್ಷ್ಯ ವಹಿಸಲು ಸೂಚಿಸಲಾಗಿದೆ. ಯಾವುದಾದರೂ ಅಕ್ರಮ ಕಂಡುಬಂದಲ್ಲಿ ಲಾರಿಗಳನ್ನು ಜಪ್ತಿಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾನು ಕೂಡಾ ಪೋತಂಗಲ್‌ ಗ್ರಾಮಕ್ಕೆ ನಸುಕಿನಲ್ಲೇ ನಾಲ್ಕೈದು ಬಾರಿ ಭೇಟಿ ನೀಡಿದ್ದೇನೆ. ಆಗ ಯಾವುದೇ ರೀತಿಯ ಅಕ್ರಮ ಸಾಗಾಟ ಕಂಡುಬಂದಿರಲಿಲ್ಲ. ಈ ಕುರಿತು ಸುಲೇಪೇಟ್‌ ಪೊಲೀಸ್‌ ಠಾಣೆಗೂ ನಿಗಾ ವಹಿಸಲು ಸೂಚನೆ ನೀಡಲಾಗಿದೆ. -ಅಂಜುಮ್‌ ತಬಸುಮ್‌, ತಹಶೀಲ್ದಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next