ದಾವಣಗೆರೆ; ಎಸ್.ಎಸ್. ಬಡಾವಣೆಯ 4ನೇ ಮೇನ್ 9ನೇ ಕ್ರಾಸ್‌ನಲ್ಲಿ ದೂಡಾಕ್ಕೆ ಸೇರಿರುವ ಸರ್ವೆ ನಂಬರ್ 207/1ಎ4ರ ಪಾರ್ಕ್‌ನಲ್ಲಿ ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡವನ್ನು ಶುಕ್ರವಾರ ತೆರವುಗೊಳಿಸಲಾಯಿತು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಆಯುಕ್ತ ಬಿ.ಟಿ. ಕುಮಾರಸ್ವಾಮಿ ಸಮಕ್ಷಮದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಇಲ್ಲಿ ಯೋಗ ತರಬೇತಿ ಮಾಡಬೇಕು ಅಂದುಕೊಳ್ಳಲಾಗಿತ್ತು ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ಜಾಗದ ಮಾಲೀಕರು, ತಮ್ಮದೇನೂ ತಪ್ಪಿಲ್ಲ. ಆದರೂ ತೆರವುಗೊಳಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, 1 ಎಕರೆ 28 ಗುಂಟೆಗೆ ನಕಲಿ ದಾಖಲೆ ಸೃಷ್ಟಿಸಿ 29-30 ನಿವೇಶನ ಸಂಖ್ಯೆ ಹಾಕಿ, ಮಹಾನಗರ ಪಾಲಿಕೆಯಲ್ಲಿ ಡೋರ್ ನಂಬರ್, ಕಟ್ಟಡ ಪರವಾನಿಗೆ ಪಡೆದುಕೊಳ್ಳಲಾಗಿದೆ.ಕೆಲವೆಡೆ ಅನಧಿಕೃತವಾಗಿ ನಿವೇಶನ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದಾರೆ. ಅದನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ದೇವರಾಜ ಆರಸು ಬಡಾವಣೆಯಲ್ಲೂ ಪಾರ್ಕ್ ಜಾಗ ಒತ್ತುವರಿ ತೆರವುಗೊಳಿಸಲಾಗಿದೆ. 100 ಕೋಟಿಯಷ್ಟು ಆಸ್ತಿ ಮರು ವಶಕ್ಕೆ ಪಡೆಯಲಾಗಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಈ ರೀತಿ ಮಾಡಲಾಗಿದೆ. ದಾಖಲೆ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆಯುಕ್ತ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ದೂಡಾದಿಂದ 4 ಉದ್ಯಾನವನ ನಿರ್ಮಾಣ ಮಾಡಲಾಗುವುದು. ತೆರವುಗೊಳಿಸಿರುವ ಜಾಗದಲ್ಲೂ ಪಾರ್ಕ್ ಮಾಡಲಾಗುವುದು. ದೂಡಾದಿಂದ 28 ನಿವೇಶನಕ್ಕೆ ಮಾತ್ರ ಅನುಮೋದನೆ ನೀಡಲಾಗಿದೆ. ಅಶೋಕ ನಗರ, ಯರಗುಂಟೆ ಇತರೆ ಭಾಗದಲ್ಲಿ ಅಕ್ರಮ ಬಡಾವಣೆ ಇವೆ. ಅಕ್ರಮ ಬಡಾವಣೆಗೆ ಅವಕಾಶ ನೀಡಲ್ಲ ಎಂದು ತಿಳಿಸಿದರು.