Advertisement

ಅಕ್ರಮ ವ್ಯವಹಾರ: ತನಿಖೆ ನಿಷ್ಪಕ್ಷವಾಗಿರಲಿ

12:59 AM Apr 13, 2023 | Team Udayavani |

ರಾಜ್ಯದ ಕೆಲವೊಂದು ಸಹಕಾರ ಬ್ಯಾಂಕ್‌ಗಳು ಅಕ್ರಮ ಹಣಕಾಸು ವ್ಯವಹಾರದಲ್ಲಿ ಶಾಮೀಲಾಗಿರುವುದು ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯ ವೇಳೆ ಬಯಲಾಗಿದ್ದು, ಇದೊಂದು ಆಘಾತಕಾರಿ ವಿಷಯವಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾ. 31ರಂದು ರಾಜ್ಯದ 16 ಸ್ಥಳಗಳ ಮೇಲೆ ನಡೆಸಿದ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಪತ್ರಗಳು ಈ ಸಹಕಾರಿ ಬ್ಯಾಂಕ್‌ಗಳಲ್ಲಿ 1,000 ಕೋ. ರೂ. ಮೌಲ್ಯಗಳಷ್ಟು ಅಕ್ರಮ ಹಣಕಾಸು ವ್ಯವಹಾರ ನಡೆದಿರುವುದನ್ನು ದೃಢಪಡಿಸಿವೆ.

Advertisement

ಈ ದಾಳಿಯ ವೇಳೆ ಬ್ಯಾಂಕ್‌ಗಳು ವಿವಿಧ ಅಡ್ಡಮಾರ್ಗಗಳ ಮೂಲಕ ಈ ಅಕ್ರಮ ವ್ಯವಹಾರ ಎಸಗಿರುವುದು ಸಾಬೀತಾಗಿದ್ದು ಇದರ ಹಿಂದೆ ಬಲುದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ರಾಜ್ಯದ ಕೆಲವೊಂದು ಸಹಕಾರಿ ಬ್ಯಾಂಕ್‌ಗಳ ವ್ಯವಹಾರದ ಮೇಲೆ ಹದ್ದುಗಣ್ಣಿರಿಸಿತ್ತು. ಈ ಬ್ಯಾಂಕ್‌ಗಳಲ್ಲಿನ ವ್ಯವಹಾರಗಳಲ್ಲಿ ಅಕ್ರಮ ನಡೆಯುತ್ತಿರುವ ಬಗೆಗೆ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಭಾರೀ ಪ್ರಮಾಣದ ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಈ ಸಹಕಾರಿ ಬ್ಯಾಂಕ್‌ಗಳ ಅಕ್ರಮಗಳ ಸರಣಿ ಬಯಲಾಗಿದೆ. ಅಸ್ತಿತ್ವದಲ್ಲಿ ಇಲ್ಲದ ಸಂಸ್ಥೆಗಳ ಹೆಸರಲ್ಲಿ ಚೆಕ್‌ಗಳ ಡಿಸ್ಕೌಂಟ್‌, ಬ್ಯಾಂಕ್‌ಗಳ ಆಡಳಿತ ಮಂಡಳಿಯ ಸದಸ್ಯರೇ ಹಣವನ್ನು ಸ್ವಂತ ಉದ್ದೇಶಗಳಿಗೆ ಬಳಸಿಕೊಂಡಿರುವುದು ಮಾತ್ರವಲ್ಲದೆ ಈ ಅಕ್ರಮಗಳಲ್ಲಿ ರಿಯಲ್‌ಎಸ್ಟೇಟ್‌ ಕಂಪೆನಿಗಳು, ಗುತ್ತಿಗೆದಾರರು ಶಾಮೀಲಾಗಿರುವುದೂ ಪತ್ತೆಯಾಗಿದೆ ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.

ಕೆವೈಸಿ ಸಹಿತ ಆರ್‌ಬಿಐ ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿ ನಗದು ಠೇವಣಿ ಇರಿಸಿಕೊಂಡು ನಿಶ್ಚಿತ ಠೇವಣಿ ಖಾತೆಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದಲ್ಲದೆ, ಇದನ್ನು ಆಧಾರವಾಗಿಸಿ ಸಾಲ ಮಂಜೂರು ಮಾಡಲಾಗಿದೆ. ತೆರಿಗೆ ವಂಚನೆಗಾಗಿ ಉದ್ಯಮಿಗಳು ಬೋಗಸ್‌ ವೆಚ್ಚ ತೋರಿಸಲು ಈ ಸಹಕಾರಿ ಬ್ಯಾಂಕ್‌ಗಳನ್ನು ಬಳಸಿಕೊಂಡಿರುವುದೂ ಸಾಬೀತಾಗಿದೆ. ಈ ಎಲ್ಲ ಅಕ್ರಮಗಳು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಸಹಕಾರಿ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಇಂತಹ ದೊಡ್ಡ ಮಟ್ಟದ ಹಣಕಾಸು ಅಕ್ರಮ ನಡೆದಿರುವುದು ಬಹುದೊಡ್ಡ ಕಳಂಕವೆ. ವಿಶೇಷ ಎಂದರೆ ಕಾಲ ಕಾಲಕ್ಕೆ ಲೆಕ್ಕ ಪರಿಶೋಧನೆ ನಡೆಸುವ ಸಹಕಾರಿ ಇಲಾಖೆಗಾಗಲಿ, ಕೇಂದ್ರೀಯ ತನಿಖಾ ಸಂಸ್ಥೆಗಳಿಗಾಗಲಿ ಈ ಬಗ್ಗೆ ಯಾವುದೇ ಸುಳಿವು ಲಭಿಸದಿರುವುದು ತೀರಾ ಅಚ್ಚರಿಯೇ ಸರಿ. ಈ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿಯಲ್ಲಿರುವವರೇ ಅಕ್ರಮ‌ದಲ್ಲಿ ನೇರವಾಗಿ ಶಾಮೀಲಾಗಿರುವುದಲ್ಲದೆ ಹಣವನ್ನು ಉದ್ಯಮ, ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ದಾಷ್ಟತನ ಪ್ರದರ್ಶಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಸಹಕಾರ ಕ್ಷೇತ್ರದ ವ್ಯವಹಾರದ ಪಾರದರ್ಶಕತೆಯ ಬಗೆಗೆ ಅಪಸ್ವರಗಳು ಕೇಳಿಬರತೊಡಗಿವೆ. ಇದರ ನಡುವೆಯೇ ಕೆಲವೇ ಕೆಲವರು ನಡೆಸಿದ ಇಂತಹ ಅಕ್ರಮ ವ್ಯವಹಾರಗಳು ಸಹಕಾರಿ ಕ್ಷೇತ್ರದ ವಿಶ್ವಾಸಾರ್ಹತೆಯ ಕುರಿತು ಸಂಶಯ ಮೂಡುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಹಕಾರ ಇಲಾಖೆ ಕೂಡ ಕೇಂದ್ರದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next