Advertisement
ಉಪ್ಪಿನಂಗಡಿ ಬಳಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ನದಿಯ ಇನ್ನೊಂದು ಬದಿ ಇಳಂತಿಲ ಗ್ರಾ.ಪಂ.ಗೆ ಸೇರಿದ್ದು. ಇಲ್ಲಿ ಕಳೆದ ಮಳೆಗಾಲದಲ್ಲಿ ಬಹಳಷ್ಟು ಮರಳು ನದಿ ಕಿನಾರೆಯಲ್ಲಿ ರಾಶಿ ಬಿದ್ದಿದೆ. ರಾತ್ರಿ ಹೊತ್ತು ಇಲ್ಲಿಂದ ಅವ್ಯಾಹತವಾಗಿ ಮರಳು ಲೂಟಿಯಾಗುತ್ತಿದೆ.
ನಾನ್ ಸಿಆರ್‌ಝಡ್ ವಲಯದಲ್ಲಿ ನಾಲ್ಕು ವರ್ಷಗಳಿಂದ ಮರಳು ದಿಬ್ಬಗಳ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಇದು ಮರಳು ಮಾಫಿಯಾದವರಿಗೆ ವರವಾಗಿ ಪರಿಣಮಿಸಿದೆ. ಟೆಂಡರ್ ನಡೆಯದೇ ಮರಳಿನ ಅಭಾವ ತಲೆದೋರಿರುವುದರಿಂದ ಮರಳಿಗೆ ಈಗ ಚಿನ್ನದ ಬೆಲೆಯಿದ್ದು, ಜನ ಸಾಮಾನ್ಯರಿಗೆ ಮರಳು ಕೈಗೆಟಕುತ್ತಿಲ್ಲ. ಬಡ ವರ್ಗದವರಿಗೆ ಸರಕಾರ ನೀಡಿರುವ ಆಶ್ರಯ ಯೋಜನೆ ಮನೆಗಳ ಕಾಮಗಾರಿಗಳು ಕೂಡ ಮರಳಿನ ಅಭಾವದಿಂದ ಭಾಗಶಃ ಸ್ತಬ್ಧಗೊಳ್ಳುವಂತಾಗಿವೆ. ಟೆಂಡರ್ ನಡೆಯದಿದ್ದರೂ ಕಳ್ಳ ಮಾರ್ಗದ ಮೂಲಕ ಮರಳು ಲೂಟಿಯಾಗೋದು ಮಾತ್ರ ನಿಂತಿಲ್ಲ. ಈ ಮರಳನ್ನು ದೂರದೂರಿಗೆ ಸಾಗಿಸಿ ದುಪ್ಪಟ್ಟು ಬೆಲೆಗೆ ಮಾರಲಾಗುತ್ತಿದೆ. ರಾತ್ರಿಯಲ್ಲೇ ಅಕ್ರಮ ದಂಧೆ
ಉಪ್ಪಿನಂಗಡಿಯ ಕೂಟೇಲ್‌ನ ಎದುರಿಗೆ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ರಾತ್ರಿಯಿಡೀ ಮೂರ್‍ನಾಲ್ಕು ಟಾರ್ಚ್ ಲೈಟ್‌ಗಳು ಬೆಳಗುತ್ತಿದ್ದು, ಯಾರಿಗೂ ಅನುಮಾನ ಬಾರದಂತೆ ಇಲ್ಲಿ ಟಾರ್ಚ್ ಲೈಟ್ ಹಾಗೂ ಬೆಳದಿಂಗಳ ಸಹಾಯದಿಂದ ವಾಹನಕ್ಕೆ ಮರಳು ಲೋಡ್ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ನದಿಯ ಈ ಬದಿಯಿಂದ ಪರಿಶೀಲಿಸಲು ಟಾರ್ಚ್ ಬೆಳಗಿದರೆ ಮೀನು
ಹಿಡಿಯುವವರಂತೆ ನಟಿಸುತ್ತಾರೆ. ಮರಳನ್ನು ಉಪ್ಪಿನಂಗಡಿ- ಕಾಯರ್ಪಾಡಿ ರಸ್ತೆಗೆ ಸೇರುವ ಎರಡು ದಾರಿಗಳಲ್ಲಿ ಸಾಗಾಟ ನಡೆಸಿ ಗುಪ್ತ ಸ್ಥಳದಲ್ಲಿ ಶೇಖರಿಸುತ್ತಾರೆ. ಬಳಿಕ ಅಲ್ಲಿಂದ ಟಿಪ್ಪರ್‌ಗಳಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಸಲಾಗುತ್ತಿದೆ. ಎಲ್ಲವೂ ಅಕ್ರಮವೇ. ಇಲ್ಲಿ ಅಕ್ರಮ ಮರಳು ದಂಧೆಕೋರರು ನಿತ್ಯ ಸಾವಿರಾರು ರೂ. ಸಂಪಾದಿಸುತ್ತಿದ್ದಾರೆ. ಅಕ್ರಮ ಮರಳು ಲೂಟಿಕೋರರಿಂದ ನೇತ್ರಾವತಿ ನದಿ ದಡದಲ್ಲಿ ವಾಹನಗಳ ಟೈರ್ ಗುರುತುಗಳೇ ಕಾಣಿಸುತ್ತಿವೆ.
Related Articles
ಮರಳಿನ ಹಕ್ಕನ್ನು ಗ್ರಾ.ಪಂ.ಗೆ ನೀಡಬೇಕು. ಮರಳನ್ನು ಜನರಿಗೆ ನೀಡ ಬೇಕು ಎನ್ನುವ ಆಗ್ರಹ ದೊಂದಿಗೆ ಮರಳು ಸತ್ಯಾಗ್ರಹ ಸಮಿತಿ ಉಪ್ಪಿನಂಗಡಿಯಲ್ಲಿ ಹೋರಾಟ ನಡೆಸಿತು. ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಜನಾಂದೋಲನ ರೂಪಿಸಿತ್ತು. ಈ ಹೋರಾಟದಲ್ಲಿದ್ದವರಲ್ಲಿ ಓರ್ವರು ಇಳಂತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತ ವಾಗಿದೆ. ಮರಳು ಸಾಗಾಟಕ್ಕೆ ತನ್ನ ಜಾಗದಲ್ಲಿ ಅನುವು ಮಾಡಿಕೊಡುತ್ತಿರುವ ಈ ವ್ಯಕ್ತಿ ಎಲ್ಲರೆದುರು ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಹೋರಾಟದ ನಾಟಕವಾಡಿ, ಇನ್ನೊಂದೆಡೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ್ದಾರೆ ಎನ್ನುವುದು ಸಾರ್ವಜನಿಕರ ಬಹುದೊಡ್ಡ ಆರೋಪವಾಗಿದೆ.
Advertisement
ಅಕ್ರಮ ಗಣಿಗಾರಿಕೆಯನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿದ್ದು, ಪೊಲೀಸ್ ಇಲಾಖೆ ಇಂತಹ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಯುವ ಕೆಲಸ ಮಾಡಬೇಕಿತ್ತು. ಆದರೆ ಇಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಪಿಕ್‌ಅಪ್ ವಾಹನದಲ್ಲಿ ಮರಳು ಸಾಗಾಟವಾಗು ತ್ತಿದ್ದರೂ ಇಲಾಖೆಗಳು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ಮೌನವಾಗಿವೆ. ಇನ್ನಾದರೂ ಎಚ್ಚೆತ್ತುಕೊಂಡು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಮಾಹಿತಿ ಕಲೆಹಾಕಲು ಸೂಚನೆನೇತ್ರಾವತಿ ನದಿ ಕಿನಾರೆಯಲ್ಲಿ ಇಳಂತಿಲ ಗಡಿ ಗ್ರಾಮದ ಸರಹದ್ದಿನಲ್ಲಿ ಮರಳುಗಾರಿಕೆಗೆ ಯಾವುದೇ ಅನುಮತಿಯನ್ನು ಗಣಿ ಇಲಾಖೆಯಿಂದ ನೀಡಿರುವುದಿಲ್ಲ. ಅಲ್ಲದೆ, ಅಕ್ರಮ ಗಣಿಗಾರಿಕೆ ನಡೆಯುವ ವಿಚಾರ ತನ್ನ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ, ಕ್ರಮ ಜರಗಿಸುವುದಕ್ಕಾಗಿ ಸಂಬಂಧಿಸಿದ ಗ್ರಾಮ ಕರಣಿಕರಿಗೆ ತತ್‌ಕ್ಷಣ ಮಾಹಿತಿ ಕಲೆಹಾಕುವಂತೆ ಸೂಚಿಸುತ್ತೇನೆ.
– ಪ್ರತೀಕ್ಷಾ,
ಕಂದಾಯ ನಿರೀಕ್ಷಕರು, ಬೆಳ್ತಂಗಡಿ