Advertisement

ಅಕ್ರಮ ಮರಳು ಸಾಗಣೆ: ಇಬ್ಬರ ಬಂಧನ

11:28 AM Nov 28, 2017 | Team Udayavani |

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕು ಹೊನಗುಂಡಾ ಗ್ರಾಮದ ಬಳಿ ಹರಿಯುವ ಕಾಗಿಣಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ವಡ್ಡರವಾಡಿ ಹತ್ತಿರ ಪೊಲೀಸರು ಟಿಪ್ಪರ್‌ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ರಜಾಕ್‌ ಪಟೇಲ್‌ ಹಾಗೂ ಪ್ರವೀಣ ಮಹಾದೇವಪ್ಪ ಪಾಟೀಲ ಎಂದು ಗುರುತಿಸಲಾಗಿದೆ. ಹೊನಗುಂಟಾ ಗ್ರಾಮದ ಹತ್ತಿರ ಕಾಗಿಣಾ ನದಿಯಿಂದ ಮರಳು ತೆಗೆದುಕೊಂಡು ಹೋಗುವಾಗ ವಡ್ಡರವಾಡಿ ಹತ್ತಿರ ಶಹಾಬಾದ ನಗರ ಠಾಣೆ ಪಿಐ ಹಾಗೂ ಸಿಬ್ಬಂದಿಗಳು ಪಂಚರ ಸಮಕ್ಷಮದಲ್ಲಿ ತಡೆದರು. ಚಾಲಕನಿಗೆ ವಿಚಾರಿಸಿದಾಗ ಆತ ತನ್ನ ಹೆಸರು ಎಂ.ಎಸ್‌.ಕೆ. ಮಿಲ್‌ ಪ್ರದೇಶದ ರಜಾಕ್‌ ಪಟೇಲ್‌ ತಂದೆ ಅಜಮೀರ್‌ ಪಟೇಲ್‌ ಎಂದು ಹೇಳಿದ. ಮರಳಿನ ಕುರಿತು ಯಾವುದೇ ದಾಖಲಾತಿ ಇಲ್ಲ ಎಂದು ಹೇಳಿದ.

Advertisement

ಪೊಲೀಸರು ಪರಿಶೀಲಿಸಿದಾಗ ಮೂರು ಲಕ್ಷ ರೂ. ಮೌಲ್ಯದ ಟಿಪ್ಪರ್‌ ಹಾಗೂ ಅದರಲ್ಲಿ 5000 ರೂ. ಮೌಲ್ಯದ ಅಕ್ರಮ ಮರಳು ಇದ್ದುದು ಪತ್ತೆಯಾಗಿ ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಚಾಲಕ ಹಾಗೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇ ರೀತಿ ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ್‌ನಲ್ಲಿ ಸಾಗಿಸುತ್ತಿದ್ದಾಗ ಪಿಐ ಹಾಗೂ ಸಿಬ್ಬಂದಿಗಳು ಪಂಚರ ಸಮಕ್ಷಮದಲ್ಲಿ ಹೊನಗುಂಟಾ ಗ್ರಾಮದ ಸರಕಾರಿ ಶಾಲೆ ಹತ್ತಿರ ಟಿಪ್ಪರ್‌ ನಿಲ್ಲಿಸಿದಾಗ ಚಾಲಕ ಪರಾರಿಯಾದ. ಟಿಪ್ಪರ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ಆತ ತಾನು ಸಂತೋಷ ಕಾಲೋನಿಯ ಪ್ರವೀಣ ಮಹಾದೇವಪ್ಪ ಪಾಟೀಲ ಎಂದು ಹೇಳಿದ. 

ಪರಾರಿಯಾದ ಚಾಲಕ ನಗರದ ಹಸನ್‌ ಹನ್ನುಸಾಬ್‌ ಎಂದೂ ಸಹ ಬಾಯಿಬಿಟ್ಟ. ಐದು ಲಕ್ಷ ರೂ.ಗಳ ಮೌಲ್ಯದ ಟಿಪ್ಪರ್‌ ಹಾಗೂ 5000 ರೂ. ಮೌಲ್ಯದ ಅಕ್ರಮ ಮರಳನ್ನು ಹಾಗೂ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಕುರಿತು ಶಹಾಬಾದ ನಗರ ಠಾಣೆಯಲ್ಲಿ ಮಾಲೀಕ ಹಾಗೂ ಚಾಲಕ ಹಸನ್‌ ಮತ್ತು ಪ್ರವೀಣ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next