ಕಾಪು: ಬಳ್ಕುಂಜೆಯಿಂದ ಮರಳು ತೆಗೆದು ಟಿಪ್ಪರ್ ಲಾರಿ ಮೂಲಕ ಉಡುಪಿಗೆ ಸಾಗಿಸುತ್ತಿದ್ದ ಜಾಲವನ್ನು ಕಾಪು ಪೊಲೀಸರು ಸೋಮವಾರ ರಾತ್ರಿ ಕಾಪುವಿನಲ್ಲಿ ಪತ್ತೆ ಹಚ್ಚಿದ್ದಾರೆ.
ಎಸ್‌ಎಸ್‌ಐ ರವೀಶ್ ಹೊಳ್ಳ ಅವರು ಸಿಬಂದಿ ಜತೆಗೂಡಿ ರೌಂಡ್ಸ್‌ನಲ್ಲಿದ್ದಾಗ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಬಳಿ ಮಟ್ಟು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ ಎರಡು ಯೂನಿಟ್‌ನಷ್ಟು ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದರು.
ಟಿಪ್ಪರ್ ಚಾಲಕ ಮೊಹಮ್ಮದ್ ಶಾಬಾದ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸಚ್ಚರಿಪೇಟೆಯ ಸಂತೋಷ್ ಕ್ರಾಸ್ತಾ ಅವರಿಗೆ ಸೇರಿದ ಟಿಪ್ಪರ್ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ದಾಮಸ್‌ಕಟ್ಟೆಯ ಬಳ್ಕುಂಜೆ ಹೊಳೆಯಲ್ಲಿ ಮರಳನ್ನು ತೆಗೆದು ಮಾರಾಟ ಮಾಡಿ ಲಾಭ ಮಾಡುವ ಉದ್ದೇಶದಿಂದ ಮಟ್ಟು ಕಡೆಗೆ ವಾಹನದಲ್ಲಿ ಸಾಗಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದ.
ಆರೋಪಿಗಳು ತಮ್ಮ ಸ್ವಂತ ಲಾಭದ ಉದ್ದೇಶಕ್ಕಾಗಿ ಸರಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದು, ಮರಳು ಸಾಗಿಸುತ್ತಿದ್ದ ಟಿಪ್ಪರ್ ಮತ್ತು ಅದರಲ್ಲಿದ್ದ 10 ಸಾವಿರ ರೂಪಾಯಿ ಬೆಲೆಬಾಳುವ 2 ಯೂನಿಟ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.