ಹುಬ್ಬಳ್ಳಿ: ತಾಲೂಕಿನ ಉಮಚಗಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಅಕ್ರಮ ಮರಳು ದಾಸ್ತಾನು ಕುರಿತಾಗಿ ದೂರುಗಳಿದ್ದರೂ ಅಧಿಕಾರಿಗಳು ಕ್ರಮಕ್ಕೆ ಗಂಭೀರ ಚಿಂತನೆ ನಡೆಸದೆ ಉದಾಸೀನತೆ ತೋರಿದ್ದರು. ಹಿರಿಯ ಅಧಿಕಾರಿಯೊಬ್ಬರ ಸೂಚನೆ ಮೇರೆಗೆ ಅಧಿಕಾರಿಗಳು ಅಕ್ರಮ ಮರಳು ದಾಸ್ತಾನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಣಿ ಮತ್ತು ಭೂಗರ್ಭ ಇಲಾಖೆ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಉಮಚಗಿ ಗ್ರಾಮದಲ್ಲಿ ಅಲ್ಲಿನ ಹಳ್ಳದಿಂದ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಹೊಲಗಳಲ್ಲಿ ಮರಳು ದಾಸ್ತಾನು ಮಾಡಿದ್ದು ಕಂಡು ಬಂದಿದೆ.
ಅಕ್ರಮ ಮರಳು ದಾಸ್ತಾನು ಕುರಿತಾಗಿ ಸಂಗ್ರಹ ಮಾಡಿದ ಜಮೀನು ಮಾಲೀಕರು ಹಾಗೂ ದಾಸ್ತಾನು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಗಣಿ ಮತ್ತು ಭೂಗರ್ಭ ಇಲಾಖೆ ಹಿರಿಯ ಭೂ ವಿಜ್ಞಾನಿ(ಖನಿಜ) ಅವರು ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಭೂ ಮಾಲೀಕರಾದ ಪಾಟೀಲ ರುಕ್ಮವ್ವ ಹಾಗೂ ಮರಳು ಸಂಗ್ರಹಿಸಿದ್ದ ಯಶವಂತ, ಬಸಪ್ಪ, ಶಿವಪ್ಪ, ಮುತ್ತಪ್ಪ ಅವರ ಮೇಲೆ ದೂರು ದಾಖಲಿಸಲಾಗಿದೆ.
ಅದೇ ರೀತಿ ಮರಳು ಸಂಗ್ರಹಿಸಿದ ಆರೋಪದ ಮೇರೆಗೆ ಶಿವನಗೌಡ, ಶಂಕ್ರಪ್ಪ, ಮಲ್ಲೇಶ, ವಿರೂಪಾಕ್ಷಪ್ಪ ಅವರ ವಿರುದ್ಧವೂ ದೂರು ದಾಖಲಿಸಿದ್ದು, ಒಟ್ಟಾರೆ ಸುಮಾರು 31 ಟ್ರ್ಯಾಕ್ಟರ್‌ಗಳಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಉಮಚಗಿ ಸೇರಿದಂತೆ ಕೆಲವೊಂದು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದಾಗಲೂ ಸ್ಥಳೀಯ ಅಧಿಕಾರಿಗಳು ಅಂತಹದ್ದೇನು ಕಂಡು ಬಂದಿಲ್ಲ ಎಂದು ಸಾಗಿ ಹಾಕುವ ಯತ್ನ ತೋರಿದ್ದರು.
ಅಕ್ರಮ ಮರಳು ಗಣಿಗಾರಿಕೆ ನಡೆಸುವವರು ರಾಜಕೀಯ ಸಂಪರ್ಕ ಹೊಂದಿದವರಾಗಿದ್ದು, ಆ ಪ್ರಭಾವವನ್ನೇ ಬಳಸಿಕೊಂಡು ತಮ್ಮ ವಿರುದ್ಧ ಧ್ವನಿ ಎತ್ತದಂತೆ ನೋಡಿಕೊಂಡಿದ್ದರು ಎನ್ನಲಾಗಿದೆ. ಗಣಿ ಮತ್ತು ಭೂ ಗರ್ಭ ಇಲಾಖೆ ಸಚಿವರು ಧಾರವಾಡ ಜಿಲ್ಲೆಯವರೇ ಆಗಿದ್ದು, ಅವರದ್ದೇ ಸ್ವಂತ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅದರ ವಿರುದ್ಧ ಸ್ಪಷ್ಟ ಕ್ರಮ ಇಲ್ಲವಾಗಿತ್ತು.
ಉಮಚಗಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಉತ್ತಮ ಗುಣಮಟ್ಟದ್ದಲ್ಲದ ಮರಳನ್ನೇ ಉತ್ತಮ ಗುಣಮಟ್ಟದ ಮರಳು ಎಂದು ಮಾರಾಟ ಮಾಡಲಾಗುತ್ತಿತ್ತು. ಅಕ್ರಮ ಮರಳು ಗಣಿಗಾರಿಕೆಯಿಂದ ಹಳ್ಳದಲ್ಲಿ ಕಂದಕಗಳು ಉಂಟಾಗುತ್ತಿದ್ದು, ಮಳೆಗಾಲದಲ್ಲಿ ಇದರಿಂದ ಅಪಾಯವಾಗುವ ಸಾಧ್ಯತೆ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದರು.
ಉಮಚಗಿ ಇನ್ನಿತರ ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಅವರು ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರಿಂದ ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.