ಆಲೂರು: ತಾಲೂಕಿನ ಕೆಲವು ಭಾಗಗಳಲ್ಲಿ ಜನಪ್ರತಿನಿಧಿಗಳು, ತಾಲೂಕು ಆಡಳಿತ,ಪೊಲೀಸ್ ಇಲಾಖೆ ಕುಮ್ಮಕ್ಕಿ ನಿಂದ ಅಕ್ರಮ ಮರಳು ದಂಧೆಕೋರರು ಲಾಕ್‌ಡೌನ್ ದುರುಪಯೋಗ ಪಡಿಸಿಕೊಂಡು ಅಕ್ರಮ ಮರಳು ಸಾಗಾಣಿಕೆಗೆ ಮಾಡುತ್ತಿದ್ದಾರೆ ಎಂದುತಾಲೂಕು ಕರವೇ ಅಧ್ಯಕ್ಷ ನಟರಾಜ್ ಆರೋಪಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ರಾತ್ರಿ 12ರಿಂದ ಬೆಳಗಿನ ಜಾವ 4 ವರೆಗೆಸುಮಾರು 150 ಲಾರಿಗಳು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಒಂದು ಪರವಾನಿಗೆಯಲ್ಲಿ 5 ರಿಂದ 6 ಲೋಡ್ ಮರಳನ್ನು ಸಾಗಿಸಲಾಗುತ್ತಿದೆ. ಎಲ್ಲ ವಿಚಾರ ತಿಳಿದಿದ್ದರೂ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸುಮ್ಮನಿದೆ ಎಂದು ಆರೋಪಿಸಿದರು.
ಆನ್‌ಲೈನ್ ಮೂಲಕ ದೂರ ದೂರದ ಊರುಗಳಿಗೆ ಒಂದು ಪರ್ಮಿಟ್ ತಂದು ಸ್ಥಳೀಯವಾಗಿ ನಾಲ್ಕರಿಂದ 5 ಲೋಡ್ ಮರಳನ್ನು ಸಾಗಾಟ ಮಾಡಲಾಗುತ್ತಿದೆ. ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆ ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತ ಗಮನ ಹರಿಸಿಲ್ಲ. ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರು ಸೇರಬಾರದು ಎಂದು ಸರ್ಕಾರ ಆದೇಶ ನೀಡಿದೆ. ಆದರೆ 100 ರಿಂದ 150 ಲಾರಿಗಳು ನಿರಂತವಾಗಿ ಮರಳು ಸಾಗಣಿಕೆ ಮಾಡುತ್ತಿವೆ ಎಂದು ಆರೋಪಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ರಘು ಪಾಳ್ಯ, ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕರವೇ ವತಿ ಯಿಂದ ಲಾರಿಗಳನ್ನು ತಡೆ ಹಿಡಿಯುತ್ತೇವೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಬರೋವರೆಗೂ ಲಾರಿಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಹೊಸಕೋಟೆ ಹೋಬಳಿ ಕರವೇ ಅಧ್ಯಕ್ಷ ವಿವೇಕ್ ವೈದ್ಯನಾಥ್, ತಾಲೂಕು ಸಂಚಾಲಕ ಚಂದ್ರು, ತಾಲೂಕು ಸಂಘಟನಾ ಕಾರ್ಯದರ್ಶಿ ಲೋಕೇಶ್ ಹಾಜರಿದ್ದರು.