Advertisement

ಭಟ್ಕಳ : ಜಾಲಿ ಕೋಡಿ ಸಮುದ್ರ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ : ಗ್ರಾಮಸ್ಥರ ಆಕ್ರೋಶ

07:47 PM May 29, 2022 | Team Udayavani |

ಭಟ್ಕಳ : ತಾಲೂಕಿನ ಜಾಲಿ ಕೋಡಿ ಸಮುದ್ರ ಕಿನಾರೆಯಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಗ್ರಾಮಸ್ಥರನ್ನು ಕತ್ತಲೆಯಲ್ಲಿಟ್ಟು ಅಧಿಕಾರಿಗಳ ಕುಮ್ಮಕ್ಕಿನಿಂದ ಈ ಕೃತ್ಯವನ್ನು ಎಸಗಲಾಗುತ್ತಿದೆ ಎಂದು ಗ್ರಾಮದ ಕೆಲವು ಯುವಕರು ದೂರಿದ್ದಾರೆ.

Advertisement

ಈ ಬಗ್ಗೆ ಟಿಪ್ಪರ್ ಲಾರಿಯೊಂದರಲ್ಲಿ ಅಕ್ರಮವಾಗಿ ಸಮುದ್ರದ ಮರಳು ತುಂಬಿಕೊಂಡು ಸಾಗುತ್ತಿರುವ ವೇಳೆಯಲ್ಲಿ ಗ್ರಾಮಸ್ಥರು ತಡೆದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ಎಲ್ಲಡೆ ವೈರಲ್ ಆಗಿದೆ. ಗುತ್ತಿಗೆದಾರರೋರ್ವರು ಜಾಲಿ ಕೋಡಿ ಸಮುದ್ರ ಕಿನಾರೆಯಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು ಕಾಮಗಾರಿಯ ನೆಪದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎನ್ನುವುದು ಅವರ ಆರೋಪವಾಗಿದೆ. ದಿನಕ್ಕೆ 10 ರಿಂದ 15 ಟಿಪ್ಪರ್ ಲಾರಿಯಲ್ಲಿ ಮರಳು ಸಾಗಾಟ ನೆಡಯುತ್ತಿದ್ದು ಲಾರಿಯನ್ನು ಅಡ್ಡ ಹಾಕುತ್ತಲೇ ಟಿಪ್ಪರ್ ಲಾರಿಯ ಚಾಲಕ ಹಾಗೂ ಮರಳು ತುಂಬಿಸುತ್ತಿರುವ ಜೆ.ಸಿ.ಬಿ. ಚಾಲಕರು ಪರಾರಿಯಾಗಿದ್ದಾರೆ ಎಂದೂ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಇದೇ ರೀತಿಯ ಅಕ್ರಮ ವ್ಯವಹಾರ ನಡೆಯುತ್ತಿದ್ದು ಈ ಕುರಿತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು, ಇದು ಗುತ್ತಿಗೆದಾರರಿಂದ ನಡೆಯುತ್ತಿದೆಯೇ, ಲಾರಿಯ ಚಾಲಕರು ಕಳ್ಳ ದಂಧೆ ನಡೆಸುತ್ತಿದ್ದಾರೆ, ಇದರ ಹಿಂದೆ ಪ್ರಭಾವಿಗಳ ಕೈವಾಡ ಇದೆಯೇ ಎನ್ನುವ ಕುರಿತೂ ತನಿಖೆಯನ್ನು ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಾಲಿ ಸಮುದ್ರ ಕಿನಾರೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಹಳ ದಿನದಿಂದ ನಡೆಯುತ್ತಿದೆ. ಈಗ ಇದು ಜಾಲಿ ಕೋಡಿಗೂ ವಿಸ್ತರಣೆಯಾಗಿದುದ್ದು ತಡೆಗೋಡೆ ಕಾಮಗಾರಿ ನೆಪದಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ. ಹಾಡು ಹಗಲೇ ಇಂತಹ ಅಕ್ರಮ ನಡೆಯುತ್ತಿದ್ದರೂ ಸಹ ಇನ್ನೂ ತನಕ ಇದರ ಬಗ್ಗೆ ಗಮನ ಹರಿಸದೇ ನಿರ್ಲಕ್ಷ ಮಾಡಲಾಗಿದೆ. ಇದರ ಹಿಂದಿರುವ ವ್ಯಕ್ತಿಗಳು ಯಾರೇ ಆಗಲಿ ಕ್ರಮ ಕೈಗೊಳ್ಳಬೇಕು . . ನಾಗರಾಜ ನಾಯ್ಕ, ಜಾಲಿ ಪಟ್ಟಣ ಪಂಚಾಯತ್ ಸದಸ್ಯ.

ಜಾಲಿ ಕೋಡಿಯಲ್ಲಿ ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಿರುವ ಕುರಿತು ಈಗಾಗಲೇ ದೂರು ಬಂದ ಪ್ರಕಾರವಾಗಿ ಕ್ರಮ ಜರುಗಿಸಲಾಗಿದ್ದು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಟಿಪ್ಪರ್ ಹಾಗೂ ಇತರೇ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಅಕ್ರಮ ಮರಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಅಕ್ರಮ ಮರಳು ಸಾಗಾಟ ಮಾಡುತ್ತಿರುವವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಅಕ್ರಮ ಮರಳುಗಾರಿಕೆಯು ನಡೆಯದಂತೆ ಸೂಕ್ತ ಕ್ರಮವನ್ನು ಕೂಡಾ ಜರುಗಿಸಲಾಗುವುದು.

Advertisement

– ಡಾ. ಸುಮಂತ್ ಬಿ.ಇ., ತಹಸೀಲ್ದಾರ್, ಭಟ್ಕಳ.

Advertisement

Udayavani is now on Telegram. Click here to join our channel and stay updated with the latest news.

Next