Advertisement

ಮದ್ಯ ಅಕ್ರಮ ಮಾರಾಟ: ಲೈಸನ್ಸ್‌ ರದ್ದು ಮಾಡಿ

10:19 PM Oct 22, 2019 | mahesh |

ಕಾಣಿಯೂರು ಗ್ರಾಮಸಭೆಯಲ್ಲಿ ಸಾರ್ವಜನಿಕರ ಆಗ್ರಹ

Advertisement

ಕಾಣಿಯೂರು: ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಕಾಣಿಯೂರು ಸ.ಹಿ.ಪ್ರಾ. ಶಾಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಾಧವಿ ಕೋಡಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಏಲಡ್ಕದಲ್ಲಿರುವ ಅಂಗಡಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ 2017ರ ಚಾರ್ವಾಕದಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಆರೋಪ ವ್ಯಕ್ತಗೊಂಡು ಅಂಗಡಿ ಕಟ್ಟಡದ ಪರವಾನಿಗೆಯನ್ನು ರದ್ದು ಮಾಡಬೇಕೆಂದು ನಿರ್ಣಯ ಕೈಗೊಂಡಿದ್ದು, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಗ್ರಾಮಸ್ಥ ಚೇತನ್‌ ನಾವೂರು ಹೇಳಿದರು. ರೈಲ್ವೇ ಇಲಾಖೆಯ ಜಾಗದಲ್ಲಿಯೇ ಹಾರ್ಡ್‌ವೇರ್‌ ಸಾಮಾನುಗಳನ್ನು ಅಂಗಡಿಯವರು ಹಾಕಿದ್ದಾರೆ. ಜಿನಸು ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅವರ ಪರವಾನಿಗೆಯನ್ನು ತತ್‌ಕ್ಷಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮ ಮದ್ಯ ಮಾರಾಟದ ಬಗ್ಗೆ ಮತ್ತು ಪರವಾನಿಗೆ ರದ್ದು ಮಾಡುವಂತೆ ಗ್ರಾಮಸ್ಥರಿಂದ ಅರ್ಜಿ ಬಂದಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿ ಜಯಪ್ರಕಾಶ್‌ ಹೇಳಿದರು.

ಸಾಲಮನ್ನಾಕ್ಕೆ ಶರ್ತಗಳನ್ನು ಕೈಬಿಡಿ
ಸರಕಾರ ಸಾಲಮನ್ನಾ ಮಾಡಿದರೂ ಕೆಲವೊಂದು ಸುತ್ತೋಲೆಗಳಲ್ಲಿನ ಗೊಂದಲಗಳಿಂದಾಗಿ ಅರ್ಹ ರೈತರಿಗೆ ಸಾಲಮನ್ನಾ ಯೋಜನೆಯಿಂದ ವಂಚಿತರಾಗುತ್ತಿದ್ದು, ಈ ನಿಟ್ಟಿನಲ್ಲಿ ಶರ್ತಗಳನ್ನು ಕೈಬಿಟ್ಟು ಆರ್ಹರಿಗೆ ಸಾಲಮನ್ನಾದ ಪ್ರಯೋಜನ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರಬೇಕು ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್‌ ಚಾರ್ವಾಕ ಒತ್ತಾಯಿಸಿ, ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಹೇಳಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.

Advertisement

ಇಡ್ಯಡ್ಕ ಶಾಲೆಗೆ ಸಂಬಂಧಪಟ್ಟ ಹಾಗೇ ಎಸ್‌ಡಿಎಂಸಿ ಅಧ್ಯಕ್ಷ ಕುಸುಮಾಧರ ಇಡ್ಯಡ್ಕ, ಕೊರಗಪ್ಪ ಗೌಡ ಇಡ್ಯಡ್ಕ, ದೋಳ್ಪಾಡಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಮಸ್ಯೆ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಲೋಕಯ್ಯ ಪರವ, ಕೊಪ್ಪ ಶಾಲೆಯ ಶಿಕ್ಷಕರ ಸಮಸ್ಯೆ ಕುರಿತು ಮೋನಪ್ಪ ಗೌಡ ಉಳವ ಅವರು ಸಭೆಯ ಗಮನಕ್ಕೆ ತಂದರು. ಗ್ರಾಮಸಭೆಗೆ ಅಧಿಕಾರಿಗಳು ಗೈರಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.

ಕಾರ್ಯದರ್ಶಿ ವರ್ಗಾವಣೆಗೆ ಕ್ರಮ ಕೈಗೊಳ್ಳಿ
ಕಾಣಿಯೂರು ಗ್ರಾ.ಪಂ. ಕಾರ್ಯದರ್ಶಿಯವರ ವರ್ಗಾವಣೆ ಕುರಿತು 2017ರ ಗ್ರಾಮ ಸಭೆಯಲ್ಲಿ ಪ್ರಸ್ತಾವಗೊಂಡಿದ್ದು, ವರ್ಗಾವಣೆ ಬಗ್ಗೆ ನಿರ್ಣಯವೂ ಕೈಗೊಳ್ಳಲಾಗಿದೆ. ಕಾರ್ಯದರ್ಶಿಯವರ ವರ್ಗಾವಣೆ ಇಷ್ಟರವರೆಗೂ ಆಗದ ಕುರಿತು ಗ್ರಾಮಸ್ಥ ಮಾಧವ ಅವರು ತಿಳಿಸಿದರು. ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷೆ ಮಾಧವಿ ಕೋಡಂದೂರು ಹೇಳಿದರು. ಈ ಬಗ್ಗೆ ಕಾರ್ಯದರ್ಶಿಯವರ ವರ್ಗಾವಣೆ ಕುರಿತು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ಆರೋಗ್ಯ ಕೇಂದ್ರಕ್ಕೆ ಜಾಗ
ಶಿವರಾಮ ಅವರು ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದಜೇìಗೇರಿಸುವ ನಿಟ್ಟಿನಲ್ಲಿ ಕಾಣಿಯೂರಿನಿಂದ ನಿಯೋಗವೊಂದು ರಾಜ್ಯ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದೆ. ಮೇಲ್ದರ್ಜೆಗೇರಿಸುವ ಸಂದರ್ಭ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಸರಕಾರಿ ಜಾಗವನ್ನು ಗಡಿಗುರುತು ಮಾಡುವಂತೆ ಗ್ರಾಮಕರಣಿಕರಲ್ಲಿ ಸದಸ್ಯ ಗಣೇಶ್‌ ಉದುನಡ್ಕ ಹೇಳಿದರು. ಸರಕಾರಿ ಜಾಗವನ್ನು ಗಡಿಗುರುತು ಮಾಡುವಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಗ್ರಾಮಕರಣಿಕರು ಹೇಳಿದರು.

ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ, ಗ್ರಾ.ಪಂ. ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಸುರೇಶ್‌ ಓಡಬಾಯಿ, ಉಮೇಶ್‌ ಆಚಾರ್ಯ ದೋಳ್ಪಾಡಿ, ಗಣೇಶ್‌ ಉದು ನಡ್ಕ, ಬೇಬಿ ಕುಕ್ಕುಡೇಲು, ಕುಸುಮಾವತಿ ಕೊಪ್ಪ, ಲಲಿತಾ ತೋಟ, ಪದ್ಮನಾಭ ಅಂಬುಲ, ವೀರಪ್ಪ ಗೌಡ ಉದ್ಲಡ್ಡ, ಸುಮಿತ್ರಾ ಕೂರೇಲು, ರುಕ್ಮಿಣಿ ನಾಗಲೋಕ, ಬಾಬು ಪುಣತ್ತಾರು, ಸೀತಮ್ಮ ಖಂಡಿಗ ಉಪಸ್ಥಿತರಿದ್ದರು.

ಗ್ರಾ.ಪಂ. ಸದಸ್ಯ ರಾಮಣ್ಣ ಗೌಡ ಮುಗರಂಜ ಸ್ವಾಗತಿಸಿ, ಸಿಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಜಮಾಖರ್ಚು ಓದಿದರು.

ಮರ ತೆರವುಗೊಳಿಸಿ
ಕಾಣಿಯೂರು- ಪುಣತ್ತಾರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವುಗೊಂಡಿಲ್ಲ.  ಗಾಳಿ ಮಳೆಗೆ ಮರ ಬಿದ್ದು ಅನಾಹುತವಾದರೆ ಇಲಾಖೆಯೇ ಹೊಣೆಯಾಗಬೇಕು ಎಂದು ಚೇತನ್‌ ನಾವೂರು ಹೇಳಿದರು. ಗ್ರಾಮ ಪಂಚಾಯತ್‌ ಸದಸ್ಯ ಗಣೇಶ್‌ ಉದುನಡ್ಕ, ಧನಂಜಯ ಕೇನಾಜೆ ಧ್ವನಿಗೂಡಿಸಿದರು.

ಪ್ರಮುಖಾಂಶಗಳು
– ಗ್ರಾಮ ಮಟ್ಟದಲ್ಲಿಯೇ ಆಧಾರ್‌ ತಿದ್ದುಪಡಿಗೆ ಅವಕಾಶ ನೀಡಿ.
– ಕಾಣಿಯೂರು ಭಾಗದಲ್ಲಿ ಮೆಸ್ಕಾಂ ಸಬ್‌ಸ್ಟೇಶನ್‌ ಸ್ಥಾಪನೆ ಅವಶ್ಯ.
– ದೋಳ್ಪಾಡಿ ಗ್ರಾಮದ ಕೊಜಂಬೇಡಿ ಹಾಗೂ ಕಟ್ಟ ಎಂಬಲ್ಲಿ ಪರಿವರ್ತನಾ ಟಿ.ಸಿ. ಅಳವಡಿಸಿ.
– ಗ್ರಾ.ಪಂ. ವ್ಯಾಪ್ತಿಗೆ ಒಬ್ಬರೇ ಗ್ರಾಮಕರಣಿಕರನ್ನು ನೇಮಕ ಮಾಡಿ.
– ಕಾಡುಪ್ರಾಣಿಗಳಿಂದಾದ ಬೆಳೆ ನಾಶಕ್ಕೆ
ಸೂಕ್ತ ಪರಿಹಾರ ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next