ವರದಿ: ಕೆ. ನಿಂಗಜ್ಜ
ಗಂಗಾವತಿ: ತಾಲೂಕಿನ ಆನೆಗೊಂದಿ ಸುತ್ತಲಿನ ಅಕ್ರಮ ರೆಸಾರ್ಟ್ ಸಕ್ರಮಗೊಳಿಸಲು ಜಿಲ್ಲಾಡಳಿತದ ಮೂಲಕ ಸರ್ಕಾರ ಸಿದ್ದತೆ ನಡೆಸಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ಪದೇ ಪದೇ ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡುವುದು ಹಾಗೂ ತೆರವು ಕಾರ್ಯ ನಡೆಸುವುದು ಇನ್ಮುಂದೆ ನಿಲ್ಲುವ ಸಾಧ್ಯತೆಗಳಿದ್ದು ರೆಸಾರ್ಟ್‌ಗಳನ್ನು ಸಕ್ರಮಗೊಳಿಸಿ ಸರ್ಕಾರಕ್ಕೆ ತೆರಿಗೆ ಮೂಲಕ ಆದಾಯ ಬರುವಂತೆ ಮಾಡಲು ಕಂದಾಯ, ಪೊಲೀಸ್, ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಸಿದ್ಧತೆ ನಡೆಸಿವೆ.
ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿರುವ ಪ್ರವಾಸಿ ತಾಣ ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಿಸಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ಇವರಿಗೆಲ್ಲಊಟ-ವಸತಿ ಕಲ್ಪಿಸಲು ಆನೆಗೊಂದಿ, ಹನುಮನಹಳ್ಳಿ, ಸಾಣಾಪುರ, ಜಂಗ್ಲಿ ರಂಗಾಪುರ ಸೇರಿ ಸಂಗಾಪುರ ಸುತ್ತಲಿನ ಹಳ್ಳಿಗಳಲ್ಲಿ ಕೃಷಿ ಭೂಮಿಯಲ್ಲಿ ಗುಡಿಸಲು ಹಾಕಿ ರೆಸಾರ್ಟ್ ನಿರ್ಮಿಸಲಾಗಿದೆ. ಇವುಗಳು ಅಕ್ರಮ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ.
ಹಂಪಿ ಭಾಗದ 14 ಗ್ರಾಮಗಳಲ್ಲಿಯೂ ಅನೇಕ ರೆಸಾರ್ಟ್‌ಗಳಿದ್ದು ಅಲ್ಲಿಯ ಮಾಲೀಕರಿಗೆ ಪ್ರಾಧಿಕಾರ ಯಾವುದೇ ನೋಟಿಸ್ ನೀಡಿಲ್ಲ. ಜೊತೆಗೆ ಕಮಲಾಪುರ ಸೇರಿ ಇಲ್ಲಿ ಹಳ್ಳಿಗಳಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಕೊಪ್ಪಳ-ಬಳ್ಳಾರಿ ಜಿಲ್ಲಾಧಿಕಾರಿಗಳಲ್ಲಿ ಆಕ್ಷೇಪವೆತ್ತಿದ್ದರಿಂದ ಆನೆಗೊಂದಿ ಭಾಗದಲ್ಲಿರುವ ರೆಸಾರ್ಟ್ ಸಕ್ರಮಗೊಳಿಸಲು ಅಗತ್ಯ ದಾಖಲಾತಿ ಪಡೆಯಲಾಗುತ್ತಿದೆ.
ದಾಖಲಾತಿ ಪರಿಶೀಲನೆ ನಂತರ ರೆಸಾರ್ಟ್ ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ. ಹಂಪಿ ಭಾಗದಲ್ಲಿ ವಿಶೇಷ ಪ್ರಕರಣ ಎಂದು ಕೆಲ ರೆಸಾರ್ಟ್ ಅಥವಾ ಹೋಟೆಲ್‌ಗಳಿಗೆ ನಿರ್ಮಾಣಕ್ಕೆ ಅನುಮತಿ ನೀಡಿದಂತೆ ಆನೆಗೊಂದಿ ಭಾಗದ ರೆಸಾರ್ಟ್‌ಗಳ ನಿರ್ಮಾಣಕ್ಕೂ ನಿಯಮ ಅನುಸರಿಸುವಂತೆ ಒತ್ತಡ ಹಾಕಲಾಗುತ್ತಿದೆ.