ಬೆಂಗಳೂರು: ಆಧಾರ್ ನಂಬರ್ ದೇಶದ ನಾಗರೀಕತ್ವದ ಅಧಿಕೃತ ದಾಖಲೆಯಾಗುವುದಿಲ್ಲ ಎಂಬ ಅಂಶವನ್ನು ಪುರಸ್ಕರಿಸಿರುವ ಹೈಕೋರ್ಟ್, ಬಾಂಗ್ಲಾದೇಶ ಮೂಲದ ಯುವತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಅಕ್ರಮವಾಗಿ ದೇಶದ ಗಡಿ ಪ್ರವೇಶಿಸಿ ಜೈಲು ಸೇರಿರುವ ಬಾಂಗ್ಲಾದೇಶದ ಯುವತಿ,ಆಧಾರ್ ಕಾರ್ಡ್ ಹೊಂದಿದ್ದ ಹಿನ್ನೆಲೆಯಲ್ಲಿ ಭಾರತೀಯ ಪೌರತ್ವವಿದೆ ಎಂದು ಪ್ರತಿಪಾದಿಸಿ ಕೋರಿದ್ದ ಜಾಮೀನು ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ ಬೂದಿಹಾಳ್ ಅವರಿದ್ದ ಏಕಸದಸ್ಯ ಪೀಠ, ಆಧಾರ್ ಕಾಯಿದೆಯ ಸೆಕ್ಷನ್ 9ರ ಉಲ್ಲೇಖದಂತೆ “ಆಧಾರ್ ನಂಬರ್ ದೇಶದ ನಾಗರೀಕತ್ವದ ದಾಖಲೆಯಲ್ಲ’ ಎಂಬ ಅಂಶ ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದೆ.
ವಿಚಾರಣೆ ವೇಳೆ, ಆರೋಪಿತ ಅರ್ಜಿದಾರಳು ಜಾಮೀನು ಅರ್ಜಿಯಲ್ಲಿ ಸ್ವತ: ಮೂಲ ವಿಳಾಸ ಬಾಂಗ್ಲಾದೇಶ ಎಂದು ತಿಳಿಸಿದ್ದಾಳೆ. ಜೊತೆಗೆ ಎಲೆಕ್ಷನ್ ಐಡಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ. ಪಾನ್ ಕಾರ್ಡ್‌ನಲ್ಲಿ ತಪ್ಪುಗಳಿವೆ. ಹುಬ್ಬಳ್ಳಿ ವಾಸಿ ಎನ್ನುವ ಆಕೆಗೆ ಬೆಂಗಾಳಿ ಭಾಷೆ ಹೊರತುಪಡಿಸಿ ಕನ್ನಡ ಮಾತನಾಡುವುದಿಲ್ಲ. ಆಕೆ ಅಕ್ರಮವಾಗಿ ದೇಶದೊಳಕ್ಕೆ ಪ್ರವೇಶಿಸಿ ನೆಲೆಸಿರುವ ಬಗ್ಗೆ ಪ್ರಬಲ ಸಾಕ್ಷ್ಯಾಧಾರಗಳಿವೆ. ಹೀಗಾಗಿ ಜಾಮೀನು ನೀಡಬಾರದು ಎಂಬ ಪ್ರಾಸಿಕ್ಯೂಶನ್ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು.
ರೇಷನ್ ಕಾರ್ಡ್ ಓದಗಿಸುವಲ್ಲಿ ವಿಫಲವಾದ ಯುವತಿ!: ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದಾಗ ಹುಬ್ಬಳ್ಳಿಯೇ ಸ್ವಂತ ವಿಳಾಸ ಎಂದು ಪ್ರತಿಪಾದಿಸಿದ್ದರು. ಹಾಗಾದರೆ, ಕುಟುಂಬಸ್ಥರ ಜೊತೆಗಿನ ರೇಷನ್ ಕಾರ್ಡ್ ಪ್ರತಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಆದರೆ, ವಿಚಾರಣೆ ವೇಳೆ ಯುವತಿ ಪರ ವಕೀಲರು ರೇಷನ್ ಕಾರ್ಡ್ ದಾಖಲೆ ಸಲ್ಲಿಸಲಿಲ್ಲ. ಈ ಅಂಶವನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ಪ್ರಕರಣ ಏನು?: ಬಾಂಗ್ಲಾದೇಶ ಮೂಲದ ಖಾದಿಜಾ ಅಲಿಯಾಸ್ ಸ್ವಪ್ನ ಸೇರಿದಂತೆ ಹಲವು ಹೆಸರುಗಳನ್ನಿಟ್ಟುಕೊಂಡಿದ್ದ ಯುವತಿ ಅಕ್ರಮವಾಗಿ ದೇಶದ ಗಡಿ ಪ್ರವೇಶಿಸಿ ಕಾನೂನು ಬಾಹಿರವಾಗಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು.
ವೇಶ್ಯಾವಾಟಿಕೆ ದಂಧೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯುವತಿ ಭಾಗಿಯಾಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ವಿಜಯನಗರ ಠಾಣೆ ಪೊಲೀಸರು ಆ. 2, 2016ರಂದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಖಾದಿಜಾ ಪಾಸ್ ಪೋರ್ಟ್ ಹಾಗೂ ವೀಸಾವಿಲ್ಲದೆ ದೇಶದೊಳಗೆ ಬಂದಿದ್ದು ಅಕ್ರಮವಾಗಿ ನೆಲೆಸಿರುವುದು ಕಂಡು ಬಂದಿತ್ತು. ಹೀಗಾಗಿ ಪ್ರಕರಣ ದಾಖಲಾಗಿತ್ತು.
ಆದರೆ, ಆರೋಪಿತ ಯುವತಿ ತಾನು ಮೂಲತ: ಹುಬ್ಬಳ್ಳಿ ಸುಭಾಷ್‌ನಗರದ ನಿವಾಸಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ಚುನವಣಾ ಗುರುತಿನ ಚೀಟಿ ಹೊಂದಿದ್ದೇನೆ ಎಂದು ಜಾಮೀನಿಗೆ ಹೈಕೋರ್ಟ್ ಮೊರೆ ಹೋಗಿದ್ದರು.