ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ಸಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಾಲ್ಕನೇ ರ್‍ಯಾಂಕ್ ಪಡೆದಿರುವ ಎಸ್. ಜಾಗೃತ್ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆದಿರುವ ರಚನಾ ಹನುಮಂತ ಸಲ್ಲಿಸಿ
ರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯ ಮೂರ್ತಿ ಜೆ.ಎಂ. ಖಾಜಿ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಮೇ 25ಕ್ಕೆ ವಿಚಾರಣೆ :
Related Articles
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಎಸ್. ಶ್ಯಾಮ್‌ಸುಂದರ್ ಅವರ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತು ಸರಕಾರ, ಸಿಐಡಿ ಪೊಲೀಸ್ ಅಧಿಕಾರಿ ಟಿ. ನರಸಿಂಹ ಮೂರ್ತಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.
ಅನಗತ್ಯವಾಗಿ ಸಿಲುಕಿಸಿದ್ದಾರೆ :
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಸಿಐಡಿ ತನಿಖೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ವಿರುದ್ಧ ಯಾವುದೇ ಆರೋಪ ಮತ್ತು ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ. ಹೀಗಿದ್ದರೂ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸುವ ಉದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಸಿಐಡಿ ಪೊಲೀಸ್ ಅಧಿಕಾರಿ ನರಸಿಂಹ ಮೂರ್ತಿ ಪ್ರಕರಣದ ದೂರುದಾರರಾಗಿದ್ದು, ಅವರೇ ತನಿಖಾ ತಂಡದಲ್ಲಿ ಸಹಾಯಕ ಅಧಿಕಾರಿಯಾಗಿದ್ದಾರೆ. ನಿಯಮಗಳ ಪ್ರಕಾರ ದೂರು ಸಲ್ಲಿಸಿದ ಅಧಿಕಾರಿಯೇ ತನಿಖೆ ನಡೆಸುವಂತಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದಾರೆ.