ಚಡಚಣ: ಬಿಜೆಪಿಯಲ್ಲಿದ್ದಾಗ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ದ್ರೋಹ ಬಗೆದ ಮಾಜಿ ಶಾಸಕ ಕಟಕದೊಂಡ ಅವರು ಕಾರಜೋಳ ಅವರ ಅಕ್ರಮ ಆಸ್ತಿಯ ದಾಖಲಾತಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ನಾನೂ ಅವರ ಅವಧಿಯಲ್ಲಿ ಮಾಡಿರುವ ಅಕ್ರಮ ಆಸ್ತಿ ಹಾಗೂ ಅಕ್ರಮ ಮರಳು ದಂಧೆಯಲ್ಲಿ ಪಡೆದ ಹಫ್ತಾ ವಿಷಯ ದಾಖಲಾತಿಗಳೊಂದಿಗೆ ಬಯಲಿಗೆಳೆಯುತ್ತೇನೆ ಎಂದು ಬಿಜೆಪಿ ಚಡಚಣ ಮಂಡಳ ಅಧ್ಯಕ್ಷ ರಾಮ ಅವಟಿ ಸವಾಲು ಹಾಕಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಗೋವಿಂದ ಕಾರಜೋಳ ವಿಮಾನ ನಿಲ್ದಾಣ ಕಾಮಗಾರಿಗೆ 340 ಕೋಟಿ ರೂ. ಬಿಡುಗಡೆಗೊಳಿಸಿ ಮರಳಿ ಕಾಮಗಾರಿ ಆರಂಭಿಸಿದರು. ಅಲ್ಲದೇ ಜಿಲ್ಲೆಯಲ್ಲಿ ಕೂಡಗಿ ವಿದ್ಯುತ್ ಅಣುಸ್ಥಾವರ ಯೋಜನೆಗೆ ಸಂಸದ ರಮೇಶ ಜಿಗಜಿಣಗಿ ಹಾಗೂ ಕಾರಜೋಳ ಅವರ ಅವಿರತ ಶ್ರಮ ಅಡಗಿದೆ. ನಾಗಠಾಣ ಮತಕ್ಷೇತ್ರದಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ಬಾಂಬಾರ ಕಂ ಬ್ರಿಡ್ಜ್ ಕಾಮಗಾರಿಗೆ 120 ಕೋಟಿ ರೂ. ಬಿಡುಗಡೆಗೊಳಿಸಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಅಲ್ಲದೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಬ್ರಿಡ್ಜ್ ಕಂ ಬಾಂದಾರ ನಿರ್ಮಾಣದ ಹಿಂದೆ ಕಾರಜೋಳ ಅವರ ಶ್ರಮವಿದೆ ಎಂದರು.
ಜಿಪಂ ಸದಸ್ಯ ಭೀಮು ಬಿರಾದಾರ ಮಾತನಾಡಿ, ಸಚಿವ ಕಾರಜೋಳ ಮಾಡುತ್ತಿರುವ ಅಭಿವೃದ್ಧಿ ಸಹಿಸದೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ ಭ್ರಷ್ಟ ಪಕ್ಷ ಎಂದು ಹೀಯಾಳಿಸಿದ್ದ ಕಟಕದೊಂಡ ಇಂದು ಅದೇ ಪಕ್ಷಕ್ಕೆ ಸೇರಿ ಭ್ರಷ್ಟರಾಗಿದ್ದಾರೆ ಎಂದು ಟೀಕಿಸಿದರು.
ಶಿವು ಭೈರಗೊಂಡ, ರಾಜುಗೌಡ ಬಿರಾದಾರ, ನಾಗು ಬಿರಾದಾರ, ಅಪ್ಪುಗೌಡ ಬಿರಾದಾರ, ಶ್ರೀಮಂತ ಉಮರಾಣಿ, ರವಿ ಕೆಂಗಾರ, ಪ್ರಭಾಕರ ನಿರಾಳೆ, ಧರೆಪ್ಪ ಬಿರಾದಾರ, ಅಶೋಕ ಕುಲಕರ್ಣಿ, ರಾಜು ಕಾತ್ರಾಳ, ಪೀರಪ್ಪ ಅಗಸರ ಇದ್ದರು.