Advertisement

ಕ್ರಿಮಿನಲ್‌ಗ‌ಳಿಗೆ ಪಾಸ್‌ಪೋರ್ಟ್‌ ಕೊಟ್ಟದ್ದು ಅಕ್ಷಮ್ಯ ಅಪರಾಧ

10:27 PM Nov 10, 2022 | Team Udayavani |

ವಿದೇಶಿ ಪ್ರಜೆಗಳು ಮತ್ತು ಕ್ರಿಮಿನಲ್‌ಗ‌ಳಿಗೆ ಅಕ್ರಮ ಪಾಸ್‌ಪೋರ್ಟ್‌ ನೀಡುತ್ತಿದ್ದ ಜಾಲವೊಂದು ಬಯಲಿಗೆ ಬಂದಿದ್ದು, ಇವರ ವ್ಯಾಪ್ತಿ ಆತಂಕ ತರಿಸುವಂತಿದೆ. ದೇಶವೊಂದರ ಆಂತರಿಕ ಭದ್ರತೆಗೆ ಸವಾಲೊಡ್ಡುವ ಇಂಥ ಪ್ರಕರಣಗಳನ್ನು ಆರಂಭದಲ್ಲೇ ಗುರುತಿಸಿ, ಚಿವುಟಿ ಹಾಕಬೇಕಾದ ಕರ್ತವ್ಯವೂ ಪೊಲೀಸ್‌ ಇಲಾಖೆ ಮೇಲಿದೆ.

Advertisement

ಪಾಸ್‌ಪೋರ್ಟ್‌ ನೀಡುವ ವಿಚಾರದಲ್ಲಿ ಆ ವ್ಯಕ್ತಿಯ ವಿಳಾಸ ಮತ್ತು ಆತನ ಕುರಿತಾಗಿ ಪರಿಶೀಲನೆ ನಡೆಸುವ ಗುರುತರ ಜವಾಬ್ದಾರಿ ಪೊಲೀಸ್‌ ಇಲಾಖೆಯ ಮೇಲಿದೆ. ಆದರೆ ಕೆಲವು ಪೊಲೀಸರು ಹಣ ಪಡೆದುಕೊಂಡು ಅಕ್ರಮವಾಗಿ ಪಾಸ್‌ಪೋರ್ಟ್‌ ಪಡೆಯಲು ಬೆಂಬಲ ನೀಡಿದ್ದಾರೆ ಎನ್ನ ಲಾಗಿದೆ. ಇದು ಒಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಈ ಪ್ರಕರಣದಲ್ಲಿ ಶ್ರೀಲಂಕಾದ ಐವರು ಮತ್ತು ಬೆಂಗಳೂರು ಹಾಗೂ ಮಂಗಳೂರಿನ ನಾಲ್ವರನ್ನು ಬಂಧಿಸಲಾಗಿದೆ. ಈ ಜಾಲವು 2020ರಿಂದ ಇಲ್ಲಿವರೆಗೆ ಸುಮಾರು 50 ಮಂದಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ ಮಾಡಿಕೊಟ್ಟಿದೆ ಎಂಬುದು ಗೊತ್ತಾಗಿದೆ. ಕೇವಲ ಪಾಸ್‌ಪೋರ್ಟ್‌ ಅಷ್ಟೇ ಅಲ್ಲ, ಚಾಲನಾ ಪರವಾನಿಗೆ ಪತ್ರವನ್ನೂ ಮಾಡಿಸಿಕೊಡ ಲಾಗಿದೆ ಎಂಬ ಅಂಶವೂ ಬಹಿರಂಗವಾಗಿದೆ.

ಇಡೀ ಪ್ರಕರಣದಲ್ಲಿ ಅಮೀನ್‌ ಸೇಠ್ ಎಂಬ ಖಾಸಗಿ ಪಾಸ್‌ಪೋರ್ಟ್‌ ಏಜೆಂಟ್‌ನ ಪಾಲು ಹೆಚ್ಚಾಗಿದೆ. ಈತನ ಹೆಸರಿನಲ್ಲಿ ಬೆಂಗಳೂರಿನ ಹಲವಾರು ಪೊಲೀಸ್‌ ಠಾಣೆಗಳಲ್ಲಿ ನಕಲಿ ಪಾಸ್‌ಪೋರ್ಟ್‌ ಮಾಡಿಸಿ ಕೊಟ್ಟ ಆರೋಪಗಳಿವೆ. ಈತ ತನ್ನ ಸಹಚರ ರವಿಕುಮಾರ್‌ ಎಂಬಾತನ ಮೂಲಕ ಸುಳ್ಳು ವಿಳಾಸದ ನಕಲಿ ಆಧಾರ್‌ ಕಾರ್ಡ್‌, ಚುನಾವಣ ಗುರುತಿನ ಚೀಟಿ, ಜನ್ಮದಿನಾಂಕ ದೃಢೀಕರಣಕ್ಕಾಗಿ ಶಾಲಾ ವರ್ಗಾವಣ ಪತ್ರ, ಪ್ರಮಾಣಪತ್ರಗಳು, ಆದಾಯ ಪ್ರಮಾಣಪತ್ರಗಳನ್ನೂ ಸೃಷ್ಟಿಸಿ ನೀಡುತ್ತಿ ದ್ದರು. ಈ ಎಲ್ಲ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದರು. ಕಡೆಗೆ ಮನೆ ಬಳಿಗೆ ಪರಿಶೀಲನೆಗಾಗಿ ಬರುವ ಪೊಲೀಸರಿಗೆ ಹಣ ನೀಡಿ, ತಮ್ನ ವಿರುದ್ಧ ಯಾವುದೇ ಕ್ರಿಮಿನಲ್‌ ಆರೋಪಗಳಿಲ್ಲ ಮತ್ತು ವಿದೇಶಿ ಪ್ರಜೆಗಳಲ್ಲ ಎಂಬ ಸರ್ಟಿಫಿಕೆಟ್‌ ಪಡೆದುಕೊಳ್ಳುತ್ತಿದ್ದರು.

ಇಡೀ ಪ್ರಕರಣ ಗಮನಿಸಿದರೆ ಈ ಆರೋಪಿಗಳು ಹಣಕ್ಕಾಗಿ ಯಾರಿಗೆ ಬೇಕಾದರೂ ಪಾಸ್‌ಪೋರ್ಟ್‌ ಮಾಡಿಸಿಕೊಡುತ್ತಿದ್ದರು ಎಂಬುದು ವೇದ್ಯ ವಾಗುತ್ತದೆ. ಕೊಲೆ ಆರೋಪಿಗೂ ಪಾಸ್‌ಪೋರ್ಟ್‌ ಮಾಡಿಸಿಕೊಟ್ಟ ಅಂಶವೂ  ಗೊತ್ತಾಗಿದೆ. ಚಿಕ್ಕಮಗಳೂರು ಮೂಲದ ಆರೋಪಿಯೊಬ್ಬ 36 ಕಳ್ಳತನ ಆರೋಪ ಹೊತ್ತಿದ್ದ. ಈತನ ಸಹೋದರನ ಮೇಲೂ 15 ಕಳ್ಳತನಗಳ ದೂರುಗಳಿವೆ. ಶಿವಮೊಗ್ಗ ಮೂಲದ ಒಬ್ಬ ಕೊಲೆ ಆರೋಪಿಯೂ ಪಾಸ್‌ಪೋರ್ಟ್‌ ಪಡೆದು ಈಗ ವಿದೇಶದಲ್ಲಿದ್ದಾನೆ. ಒಟ್ಟು 6 ಮಂದಿ ಗಂಭೀರ ಪ್ರಕರಣಗಳನ್ನು ಹೊತ್ತಿರುವವರು ಸೌದಿ ಅರೇಬಿಯಾದಲ್ಲಿ ವಾಸ ವಾಗಿದ್ದಾರೆ ಎಂಬುದು ಪೊಲೀಸರ ಮಾಹಿತಿ.  ಆಘಾತಕಾರಿ ಸಂಗತಿ ಎಂದರೆ ಆರ್ಥಿಕವಾಗಿ ಅಸ್ತವ್ಯಸ್ತವಾಗಿರುವ ಶ್ರೀಲಂಕಾದ ಮಂದಿಯೂ ಇಲ್ಲಿಗೆ ಬಂದು ಹಣ ಕೊಟ್ಟು ನಕಲಿ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದಾರೆ. ಇಂಥ ಐದು ಜನರನ್ನು ಬಂಧಿಸಲಾ ಗಿದೆ. ಒಂದು ವೇಳೆ ಹಣಕ್ಕಾಗಿ ಇವರು ದೇಶದ್ರೋಹಿಗಳಿಗೂ ಪಾಸ್‌ಪೋರ್ಟ್‌ ಮಾಡಿಸಿಕೊಟ್ಟು ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದರೆ ಗತಿ ಏನು ಎಂಬ ಪ್ರಶ್ನೆಯೂ ಮೂಡುತ್ತದೆ. ಏನೇ ಆಗಲಿ ರಾಜ್ಯ ಸರಕಾರ ಮತ್ತು ಪೊಲೀಸ್‌ ಇಲಾಖೆ ಇಂಥ ಬೆಳವಣಿಗೆಗಳಿಗೆ ಆಸ್ಪದ ನೀಡಬಾರದು. ಆರಂಭದಲ್ಲೇ ಇಂಥವರನ್ನು ಪತ್ತೆ ಹಚ್ಚಿ ಕಡಿವಾಣ ಹಾಕಬೇಕು.

Advertisement

Udayavani is now on Telegram. Click here to join our channel and stay updated with the latest news.

Next