Advertisement

ಕಾರಿಂಜದಲ್ಲಿ ರುದ್ರಗಿರಿಯ ರಣಕಹಳೆ ಸಮಾವೇಶ

10:55 PM Nov 21, 2021 | Team Udayavani |

ಬಂಟ್ವಾಳ: ಕಡಿದಾದ ಬಂಡೆಗಳ ತುದಿಯಲ್ಲಿ ಭಗವಂತನೇ ನಿರ್ಮಿಸಿರುವ ಕಾರಿಂಜ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ರಣಕಹಳೆ ಊದಿದ್ದು, ಡಿ. 21ರೊಳಗೆ ಕ್ಷೇತ್ರದ ಸುತ್ತಲೂ ನಡೆಯುವ ಅಕ್ರಮ ಗಣಿಗಾರಿಕೆ ನಿಲ್ಲದೇ ಹೋದರೆ ದ.ಕ., ಉಡುಪಿ ಜಿಲ್ಲೆಯ ಸಹಸ್ರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಜಗದೀಶ ಕಾರಂತ ಎಚ್ಚರಿಸಿದರು.

Advertisement

ಅವರು ರವಿವಾರ ಕಾರಿಂಜ ಕ್ಷೇತ್ರದ ರಥಬೀದಿಯಲ್ಲಿ ಕಾರಿಂಜ ಕ್ಷೇತ್ರದ ರಕ್ಷಣೆಗಾಗಿ, ಅಕ್ರಮ ಗಣಿಗಾರಿಕೆ, ಗೋಮಾಳ ಭೂಮಿಯ ಅತಿಕ್ರಮಣ ಹಾಗೂ ಅಪವಿತ್ರತೆಯ ವಿರುದ್ಧ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ನಡೆದ ರುದ್ರಗಿರಿಯ ರಣಕಹಳೆ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಕ್ಷೇತ್ರವನ್ನು ಸಂರಕ್ಷಿಸಲು ಬೀದಿಗಿಳಿಯಬೇಕಾದ ಅನಿವಾರ್ಯ ಸೃಷ್ಟಿಯಾಗಿರುವುದು ದುರ್ದೈವವೇ ಸರಿ. ಆದಾಯ ಬರುವ ಕ್ಷೇತಗಳ ಮೇಲಿರುವ ಕಣ್ಣು ಈ ಕ್ಷೇತ್ರದ ರಕ್ಷಣೆಯ ಮೇಲೆ ಯಾಕಿಲ್ಲ ಎಂಬುದು ಗಂಭೀರ ಪ್ರಶ್ನೆಯಾಗಿದೆ. ಇದರ ಹಿಂದೆ ವ್ಯವಸ್ಥಿತ ಸಂಚಿದ್ದು, ಹಿಂದೆ ಆಡಳಿತ ಮಾಡಿದವರ ಕಣ್ಣು ಇಲ್ಲಿನ ಬಂಡೆಗಳ ಮೇಲಿತ್ತು ಎಂಬುದು ಗಣಿಗಾರಿಕೆಯಿಂದ ಸ್ಪಷ್ಟವಾಗಿದೆ ಎಂದರು.

ಮತ್ತೊಬ್ಬ ಆಚಾರ್ಯ ಹುಟ್ಟಿ ಬರಲಿ
ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ನಿಮ್ಮ ಪ್ರಾಮಾಣಿಕತೆ ಪರೀಕ್ಷೆ ಕಾರಿಂಜ ಬೆಟ್ಟವನ್ನು ಉಳಿಸುವ ಕಾರ್ಯದಿಂದಲೇ ನಡೆಯಲಿ. ಹಿಂದೆ ಸಚಿವರಾಗಿದ್ದ ವಿ.ಎಸ್‌. ಆಚಾರ್ಯರು ಕ್ಷೇತ್ರದ ಗಣಿಗಾರಿಕೆಯನ್ನು ನಿಲ್ಲಿಸಿದ್ದು, ಈಗ ಮತ್ತೊಬ್ಬ ಆಚಾರ್ಯರು ಹುಟ್ಟಿಬರಬೇಕಿದೆ. ಜಿಲ್ಲಾಧಿಕಾರಿಗಳು, ಸಚಿವರು, ಶಾಸಕರಿಗೆ 30 ದಿನಗಳ ಕಾಲಾವಾಕಾಶ ನೀಡುತ್ತೇವೆ. ನಿಮಗೆ ಸಾಧ್ಯವಾಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಕಾರಂತ ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಬಂಟ್ವಾಳ ಕಾರ್ಯದರ್ಶಿ ಪದ್ಮನಾಭ ಮಯ್ಯ ಮಾತನಾಡಿ, ಗಣಿ, ಕಂದಾಯ, ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳೇ ತುಂಬಿದ್ದು, ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ಮಾಡುವವರನ್ನೇ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ ಎಂದು ಆರೋಪಿಸಿದರು.

Advertisement

ಇದನ್ನೂ ಓದಿ:ಪಟಿಯಾಲಾದಿಂದ ನನ್ನ ಸ್ಪರ್ಧೆ: ಅಮರಿಂದರ್‌

ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಪ್ರಸ್ತಾವನೆಗೈದರು. ಸಂಘಟನೆಯ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್‌ ನೆತ್ತರಕೆರೆ, ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯಿ ಈಶ್ವರಮಂಗಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೊಸಮನೆ ಉಪಸ್ಥಿತರಿದ್ದರು.

ಬೃಹತ್‌ ಪಾದಯಾತ್ರೆ
ಸಮಾವೇಶಕ್ಕೆ ಮೊದಲು ವಗ್ಗದಿಂದ ನಡೆದ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಪಾದಯಾತ್ರೆಯನ್ನು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸೇರಿದಂತೆ ಗಣ್ಯರು ಉದ್ಘಾಟಿಸಿದರು.

ಹಿಂಜಾವೇ ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್‌ ಬೆಳ್ಳೂರು ಸ್ವಾಗತಿಸಿದರು. ದಿನೇಶ್‌ ಸುವರ್ಣ ರಾಯಿ ನಿರ್ವಹಿಸಿದರು.

ಸರಕಾರಕ್ಕೆ ಆಗ್ರಹ
– ಕಾರಿಂಜ ಕ್ಷೇತ್ರದ 10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮವಲಯ ಎಂದು ಘೋಷಿಸಿ
– ಕ್ಷೇತ್ರಕ್ಕೆ ಹಿಂದೂ ಧರ್ಮದವರಿಗೆ ಮಾತ್ರ ಪ್ರವೇಶ ನೀಡಿ
– ಶಿವಮಾಲಾಧಾರಣೆ ಎಂಬ ಹೆಸರಿನಲ್ಲಿ ಕ್ಷೇತ್ರಕ್ಕೆ ಯಾತ್ರೆ ಬರುವಂತೆ ಹೊಸ ಸಂಪ್ರದಾಯ ಆರಂಭಿಸಿ
– ಪ್ರವಾಸೋದ್ಯಮದ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯವನ್ನು ಹಾಳುಗೆಡವದಂತೆ ಕ್ರಮ ಕೈಗೊಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next