ವರದಿ: ಕೆ. ನಿಂಗಜ್ಜ
ಗಂಗಾವತಿ: ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಕಲ್ಲು-ಮರಳು ಗಣಿಗಾರಿಕೆ ದಂಧೆ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುವ ಜತೆಗೆ ಸರಕಾರಕ್ಕೆ ರಾಜಧನವೂ ನಷ್ಟವಾಗುತ್ತಿದೆ.
ರಾಜ್ಯ ಸರಕಾರದ ಆದೇಶದಂತೆ ಪ್ರತಿ ತಾಲೂಕಿನಲ್ಲಿ ಅಕ್ರಮ ಕಲ್ಲು-ಮರಳು ಗಣಿಗಾರಿಕೆ ದಂಧೆ ತಡೆಯಲು ಟಾಸ್ಕ್ಫೋರ್ಸ್‌ಗಳನ್ನು ವಿವಿಧ ಇಲಾಖೆಗಳ ಅಧಿ ಕಾರಿಗಳ ನೇತೃತ್ವದಲ್ಲಿ ಮಾಡಲಾಗಿದ್ದರೂ ಪ್ರಮುಖವಾಗಿ ಕಂದಾಯ ಮತ್ತು ಪೊಲೀಸ್ ಇಲಾಖೆ ಮೇಲೆ ಸಂಘ ಸಂಸ್ಥೆಗಳು ಮತ್ತು ಉನ್ನತ ಅಧಿ ಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಕಂದಾಯ ಇಲಾಖೆ ಅಧಿಕಾರಿಗಳು ವರ್ಗಾವಾಗಿದ್ದು ಕೆಲವರು ಸಸ್ಪೆಂಡ್ ಆಗಿದ್ದಾರೆ. ಇನ್ನುಳಿದ ಇಲಾಖೆಯವರು ಅಕ್ರಮ ತಡೆಯುವಲ್ಲಿ ವಿಫಲರಾಗಿದ್ದಾರೆಂಬ ಮಾತು ವ್ಯಾಪಕವಾಗಿದೆ.
ತಾಲೂಕಿನ ವೆಂಕಟಗಿರಿ ಹೋಬಳಿ ಹಾಗೂ ಮಲ್ಲಾಪುರ, ಸಂಗಾಪುರ, ಉಡುಮಕಲ್ ಭಾಗದಲ್ಲಿ ಕೆಲವರು ಜಿಲ್ಲಾಡಳಿತದಿಂದ ಪರವಾನಗಿ ಪಡೆದು ಕಲ್ಲು ಕ್ವಾರಿ ಗಣಿಗಾರಿಕೆ ನಡೆಸುತ್ತಿದ್ದರೆ ಸುಮಾರು 15-20 ಕಡೆ ಅಕ್ರಮವಾಗಿ ಗಣಿಗಾರಿಕೆ ಮತ್ತು ಕಲ್ಲಿನ ಕ್ರಷರ್ ರಾಜಾರೋಷವಾಗಿ ನಡೆಯುತ್ತಿವೆ. ಕ್ರಮ ವಹಿಸಬೇಕಾದ ಗಣಿ ಭೂವಿಜ್ಞಾನ ಮತ್ತು ಅರಣ್ಯ ಇಲಾಖೆಯವರು ಅಕ್ರಮ ತಡೆಯುವಲ್ಲಿ ಸಂಪುರ್ಣ ವಿಫಲರಾಗಿದ್ದಾರೆ. ಕೆಲ ಅ ಧಿಕಾರಿಗಳು ತಡೆಯಲು ಹೋದರೆ ಸ್ಥಳೀಯ ಬಿಜೆಪಿ ಕಾಂಗ್ರೆಸ್ ನಾಯಕರು ಅ ಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಬರುತ್ತಿದ್ದಾರೆ. ಕೆಲವು ಕಲ್ಲು ಕ್ವಾರಿಗಳ ಪರವಾನಗಿ ನವೀಕರಣವಾಗಿಲ್ಲ.
ಇನ್ನೂ ನಿಗದಿ ಮಾಡಿದ ಸ್ಥಳವಲ್ಲದೇ ಅನ್ಯ ಸ್ಥಳದಲ್ಲಿ ಕಲ್ಲು ಕ್ವಾರಿ ಮತ್ತು ಕ್ರಷರ್ ನಡೆಸುತ್ತಿದ್ದಾರೆ. ಇದರಿಂದಾಗಿ ಬೃಹತ್ ಕಲ್ಲಿನ ಗುಡ್ಡ ನೆಲಸಮವಾಗಿವೆ. ಆಗೋಲಿ, ವೆಂಕಟಗಿರಿ, ಉಡುಮಕಲ್, ಬಂಡ್ರಾಳ, ಗಡ್ಡಿ, ಬೆಣಕಲ್, ವಿಠಲಾಪುರ, ಮಲ್ಲಾಪುರ ರಾಂಪುರ, ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್ ಮತ್ತು ಗೂಗಿಬಂಡಿ(ರಾಮದುರ್ಗಾ) ಹೀಗೆ ಹಲವು ಗ್ರಾಮಗಳಲ್ಲಿ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ನಂದಿಹಳ್ಳಿ, ಕಕ್ಕರಗೋಳು, ಹೆಬ್ಟಾಳ, ಮುಸ್ಟೂರು ಸೇರಿ ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ತಡೆಯಲು ಜಿಲ್ಲಾಡಳಿತ ಹಟ್ಟಿ ಚಿನ್ನದ ಗಣಿಯವರಿಗೆ ಮರಳು ತೆಗೆದು ಯಾರ್ಡ್ ಮೂಲಕ ಮಾರಾಟ ಮಾಡಲು ಅನುಮತಿ ನೀಡಿದ್ದರೂ ಹಟ್ಟಿ ಚಿನ್ನದ ಗಣಿಯವರು ಇದುವರೆಗೂ ಈ ಕಾರ್ಯ ಮಾಡುತ್ತಿಲ್ಲ. ಇದರಿಂದ ರಾತ್ರೋರಾತ್ರಿ ಇಲ್ಲಿಯ ಮರಳು ದಂಧೆಕೋರರು ಲಾರಿ, ಟ್ರಾÂಕ್ಟರ್ ಮೂಲಕ ಮರಳು ಸಾಗಿಸುತ್ತಿದ್ದಾರೆ.
ವಾರ, ತಿಂಗಳಿಗೊಮ್ಮೆ ಪೊಲೀಸ್ ಹಾಗೂ ಗಣಿ, ಭೂವಿಜ್ಞಾನ ಮತ್ತು ಕಂದಾಯ ಇಲಾಖೆಯವರು ದಾಳಿ ಮಾಡಿ ಅರಳು ವಶಕ್ಕೆ ಪಡೆದು ಸ್ಥಳದಲ್ಲೇ ದಂಡ ಹಾಕಿ ಬಿಡುತ್ತಿದ್ದಾರೆ. ಇನ್ಮೂ ಗಂಗಾವತಿ ದೇವಘಾಟ, ಚಿಕ್ಕಜಂತಗಲ್ ತುರುಮಂದಿ ಬಯಲು ಮತ್ತು ಗೂಗಿಬಂಡಿ ಕ್ಯಾಂಪ್ ಹತ್ತಿರ ಅಕ್ರಮ ಮರಳು ದಂಧೆ ನಡೆಯುತ್ತಿದೆ. ರಸ್ತೆ ಸೇರಿ ವಿವಿಧ ಕಾಮಗಾರಿ ಮತ್ತು ಮನೆಗಳನ್ನು ನಿರ್ಮಾಣ ಮಾಡಲು ಕಲ್ಲು-ಮರಳು ಅಗತ್ಯವಾಗಿದ್ದು, ಇದನ್ನು ಸರಕಾರ ಜನತೆಗೆ ಕಾನೂನು ಬದ್ಧವಾಗಿ ಸಿಗುವಂತೆ ಮಾಡಬೇಕು. ನಿಯಮಗಳನ್ನು ಪಾಲಿಸಿ ಪರಿಸರ ಸಂರಕ್ಷಣೆ ಜೊತೆಗೆ ಅಗತ್ಯ ಮರಳು ಮತ್ತು ಕಲ್ಲು ಗಣಿಗಾರಿಕೆ ಒದಗಿಸಬೇಕಿದ್ದು, ನೂತನ ಗಣಿ ಭೂವಿಜ್ಞಾನ ಸಚಿವರಾಗಿರುವ ಹಾಲಪ್ಪ ಆಚಾರ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾಯ್ದು ನೋಡಬೇಕಿದೆ.