Advertisement

ಕಾಳಸಂತೆಯಲ್ಲಿ ಮೆಡಿಕಲ್‌ ಸರ್ಟಿಫಿಕೇಟ್‌ ಮಾರಾಟ

09:37 PM Sep 15, 2019 | Lakshmi GovindaRaju |

ನೆಲಮಂಗಲ: ಪೊಲೀಸ್‌ ಇಲಾಖೆ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ವಾಹನ ಪರವಾನಿಗೆ ನೀಡುವ ಕಾರ್ಯಕ್ರಮದಲ್ಲಿ ಸರ್ಕಾರಿ ವೈದ್ಯರೊಬ್ಬರು ಅಕ್ರಮದ ಮೂಲಕ ಭರ್ಜರಿ ಲಾಭ ಮಾಡಿಕೊಂಡಿದ್ದಾರೆ. ಪೊಲೀಸ್‌ ಇಲಾಖೆಯಿಂದ ಪಟ್ಟಣದಲ್ಲಿ ಭಾನುವಾರ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಡಿಎಲ್‌ ವಿತರಿಸುವ ಅಭಿಯಾನ ಕೈಗೊಳ್ಳಲಾಯಿತು.

Advertisement

ಹೀಗಾಗಿ ಸಾರ್ವಜನಿಕರು ಡಿಎಲ್‌ ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು.ಅದರಲ್ಲಿ ಕೆಲವರು ಸರ್ಕಾರಿ ವೈದ್ಯರು ನೀಡುವ ದೈಹಿಕ ಹಾಗೂ ಮಾನಸಿಕ ಸಧೃಡತೆ ಧೃಡಪಡಿಸುವ ವೈದ್ಯಕೀಯ ಧೃಡೀಕರಣ ಪತ್ರದ ದಾಖಲೆ ಹೊಂದಿರಲಿಲ್ಲ.ಇದನ್ನು ಅರಿತ ಸರ್ಕಾರಿ ವೈದ್ಯರೊಬ್ಬರು ಹಣ ಪಡೆದು ಅಕ್ರಮವಾಗಿ ಮೆಡಿಕಲ್‌ ಸರ್ಟಿಫಿಕೇಟ್‌ ನೀಡಿದ್ದಾರೆ.

ಸರ್ಕಾರಿ ವೈದ್ಯ: ಲೈಸೆನ್ಸ್‌ ಅಭಿಯಾನದ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಅಬ್ದುಲ್‌ ರಹಮಾನ ಷರೀಫ್ ಖಾಸಗಿ ಕಚೇರಿಯಲ್ಲಿ ಕುಳಿತು, ಯಾವುದೇ ವೈದ್ಯಕೀಯ ಪರೀಕ್ಷೆ ಮಾಡದೇ, 100-300 ಪಡೆದು ಬಂದವರಿಗೆ‌ಲ್ಲಾ ವೈದ್ಯಕೀಯ ಧೃಡೀಕರಣ ಪತ್ರ ನೀಡಿದ್ದಾನೆ.ವೈದ್ಯನ ಅಕ್ರಮವ ದಂಧೆಯನ್ನು ಸಾರ್ವಜನಿಕರು ವೀಡಿಯೊ ಮಾಡುವ ಮೂಲಕ ಬಯಲಿಗೆಳೆದಿದ್ದಾರೆ.

ರಾಜರೋಷವಾಗಿ ಹಣ ವಸೂಲಿ: ವೈದ್ಯಕೀಯ ಧೃಡೀಕರಣ ಪತ್ರದ ಮೇಲೆ ರಹಮಾನ್‌ ಷರೀಪ್‌ ಸಹಿ ಜೊತೆಗೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಹೆಸರುಳ್ಳ ಮೊಹರು ಹಾಕಿ ವಾಹನ ಸವಾರರಿಗೆ ನೀಡಿದ್ದಾರೆ.ನಂತರ ಪಕ್ಕದಲ್ಲೇ ಕುಳಿತಿದ್ದ ಏಜೆಂಟ್‌ ರಾಜರೋಷವಾಗಿ ಹಣ ವಸೂಲಿ ಮಾಡಿದ್ದಾನೆ.ನೂರಾರು ಜನರು ಹಣ ನೀಡಿ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಪೇದೆಯ ಶ್ರೀರಕ್ಷೆ?: ಹಣ ಪಡೆದು ಮೆಡಿಕಲ್‌ ಸರ್ಟಿಫಿಕೇಟ್‌ ನೀಡುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.ಆದರೆ, ಸ್ಥಳ ಪರಿಶೀಲಿಸಿದ ಪೇದೆಯೊಬ್ಬರು ಏನು ನಡೆದಿಲ್ಲ ಎಂಬಂತೆ ಹೋಗಿದ್ದಾರೆ. ಸಬ್‌ಇನ್‌ಸ್ಪೆಕ್ಟರ್‌ ಸ್ಥಳ ಪರಿಶೀಲಿಸಲು ಬಂದಾಗ ಮಾಧ್ಯಮದವರು ಮಾಹಿತಿ ಸಂಗ್ರಹಿಸಲು ಮುಂದಾದರು. ಇನ್ಸ್‌ಪೆಕ್ಟರ್‌ ಸೂಚನೆಯಂತೆ ಮನೆಗೆ ಹೋಗಿ ವೈದ್ಯರನ್ನು ಕರೆದುಕೊಂಡು ಬಂದ ಮುಖ್ಯಪೇದೆ ಹೊನ್ನಪ್ಪ ಎಂಬ ವ್ಯಕ್ತಿ ಮಾಧ್ಯಮದವರ ಮೇಲೆ ಕೂಗಾಡಿದ್ದು, ಅಕ್ರಮವೆಸಗಲು ವೈದ್ಯರಿಗೆ ಪೇದೆ ಕುಮ್ಮಕ್ಕು ನೀಡಿದ್ದರೇ? ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗಿವೆ.

Advertisement

ಆರೋಪ: ತಾಲೂಕಿನ ತ್ಯಾಮಗೊಂಡ್ಲುವಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಹ ನಕಲಿ ಮೆಡಿಕಲ್‌ ಸರ್ಟಿಫಿಕೇಟ್‌ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ತ್ಯಾಮಗೊಂಡ್ಲು ಸರ್ಕಾರಿ ವೈದ್ಯರು ಮೆಡಿಕಲ್‌ ಸರ್ಟಿಫಿಕೇಟ್‌ ನೀಡಲು ಹಣ ಪಡೆಯುತ್ತಿದ್ದು ಸಿಬ್ಬಂದಿಗಳಿಗೆ ಹಣ ನೀಡಿದರೆ ಸರ್ಟಿಫಿಕೇಟ್‌ಗೆ ಸಹಿ ಹಾಕಿಕೊಡುತ್ತಾರೆ, ನಮಗೆ ಯಾವುದೇ ರಶೀದಿ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವೈದ್ಯರ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್‌, ವೈದ್ಯರು ಪರಿಶೀಲನೆ ಮಾಡದೇ ಹಣ ಪಡೆದು ಮೆಡಿಕಲ್‌ ಸರ್ಟಿಫಿಕೇಟ್‌ ಕೊಟ್ಟಿರುವುದು ಸರಿಯಲ್ಲ, ಮಾಹಿತಿ ಪರಿಶೀಲಿಸಿ ವೈದ್ಯರನ್ನು ಅಮಾನತು ಮಾಡುತ್ತೇನೆ
-ರಾಜೇಶ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ

ಕೆಲವು ಸರ್ಕಾರಿ ವೈದ್ಯರು ಹಣ ಪಡೆದು ಮೆಡಿಕಲ್‌ ಸೆರ್ಟಿಫಿಕೇಟ್‌ ನೀಡುತ್ತಾರೆ.ಅದರಲ್ಲಿ ಪೊಲೀಸರಿಗೆ, ಆರ್‌.ಟಿ.ಓ ಅಧಿಕಾರಿಗಳು ಶಾಮೀಲಾಗಿರುತ್ತಾರೆ.
-ಹೆಸರು ಹೇಳಲಿಚ್ಛಿಸದ ಸರ್ಕಾರಿ ವೈದ್ಯ

ಪ್ರಮಾಣ ಪತ್ರ ಪಡೆದ ಗಂಗರೇವಣ್ಣ ಪ್ರತಿಕ್ರಿಯಿಸಿ ನಾವು ಡಿ.ಎಲ್‌ ಮಾಡಿಸಲು ಬಂದಿದ್ದೇವು ಮೆಡಿಕಲ್‌ ಸರ್ಟಿಫಿಕೇಟ್‌ ಬೇಕೆಂದರು, ಸರ್ಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಡಾ.ಅಬ್ದುಲ್‌ ರೆಹಮಾನ್‌ ಷರೀಪ್‌ ಮೆಡಿಕಲ್‌ ಸರ್ಟಿಫಿಕೇಟ್‌ ನೀಡುತ್ತಿದ್ದಾರೆ ಎಂದು ತಿಳಿದು, ಯಾವುದೇ ಪರೀಕ್ಷೆಗೊಳಗಾಗದೇ 200ರೂ ನೀಡಿ ಸರ್ಟಿಫಿಕೇಟ್‌ ಪತ್ರ ಪಡೆದೆವು.
-ಗಂಗಯ್ಯ, ಮೆಡಿಕಲ್‌ ಸರ್ಟಿಫಿಕೇಟ್‌ ಪಡೆದವರು

* ಕೋಟ್ರೇಶ್‌

Advertisement

Udayavani is now on Telegram. Click here to join our channel and stay updated with the latest news.

Next