ಬೆಂಗಳೂರು: ಸಾರಿಗೆ ಇಲಾಖೆಯ ನಕಲಿ ಮೊಹರು ಮತ್ತು ದಾಖಲೆಗಳನ್ನು ಸೃಷ್ಟಿಸಿ ಹೊಸ ಆಟೋಗಳ
ಅಕ್ರಮವಾಗಿ ನೋಂದಣಿ ಮಾಡಿಸುತ್ತಿದ್ದ ಇಬ್ಬರು ಮಧ್ಯವರ್ತಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಿವಾಸಿ ಇಲಿಯಾಸ್ ಪಾಷಾ (31) ಮತ್ತು ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಕೆ. ಆನಂದ್ ಬಂಧಿತರು. ಇವರಿಂದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯ ಮೊಹರು, ನಕಲಿ ದಾಖಲೆಗಳು, ಕಂಪ್ಯೂಟರ್, ಪ್ರಿಂಟರ್, ನಕಲಿ ನಡಾವಳಿಗಳು ಹಾಗೂ ಆರು ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಅಕ್ರಮವಾಗಿ ಹೊಸ ಆಟೋಗಳ ನೊಂದಣಿ ಮಾಡಿಸಿ ಸಾರಿಗೆ ಇಲಾಖೆ ಮತ್ತು ಹೊಸ ಆಟೋ ಖರೀದಿದಾರರಿಗೆ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಕೆಲ ವರ್ಷಗಳಿಂದ ಹೊಸ ಆಟೋ ಖರೀದಿ ಪರವಾನಿಗೆ ಪ್ರಕ್ರಿಯೆನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಇಬ್ಬರು ಆರೋಪಿಗಳು, ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ಮೊಹರನ್ನು ಕಳವು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅಲ್ಲದೆ, ಇಲಾಖೆಯ ನಡಾವಳಿಗಳನ್ನು ನಕಲಿ ಮಾಡಿಕೊಂಡಿದ್ದರು.
ಬಳಿಕ ಆರೋಪಿಗಳನ್ನು ಸಂಪರ್ಕಿಸುತ್ತಿದ್ದ ಹೊಸ ಆಟೋ ಖರೀದಿದಾರರಿಗೆ, ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ಮೊಹರು ಮುದ್ರಿಸಿದ ನಕಲಿ ದಾಖಲೆಗಳನ್ನು ಕೊಟ್ಟು, ಆಟೋ ಖರೀದಿಗೆ ಪರವಾನಿಗೆ ಕೊಡಲಾಗಿದೆ ಎಂದು ನಂಬಿಸುತ್ತಿದ್ದರು. ಅಲ್ಲದೆ, ಈ ನಕಲಿ ದಾಖಲೆಗಳಿಗೆ ಆರೋಪಿ ಇಲಿಯಾಸ್ ಪಾಷಾನೇ ಆರ್‌ಟಿಒ ಅಧಿಕಾರಿ ಹೆಸರಿನಲ್ಲಿ ನಕಲಿ ಸಹಿ ಮಾಡಿ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಳ್ಳುವಂತೆ ಕಳುಹಿಸಿದ್ದ. ಇದಕ್ಕೆ ಪ್ರತಿ ಖರೀದಿದಾರನಿಂದ 30-40 ರೂ. ಕಮಿಷನ್ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದರು.
ಏಕಾಏಕಿ ಹತ್ತಾರು ಆಟೋಗಳ ನೊಂದಣಿಗೆ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಆರ್‌ಟಿಒ ಕಚೇರಿ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೋರಮಂಗಲ ಪೊಲೀಸರು ಹೇಳಿದರು.